ಮಹಿಳೆಯರ ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ ಶುಗರ್, ಬಿಪಿ , ಹಾರ್ಟ್ ರೇಟ್, ಯೂರಿನ್, ಬ್ಲಡ್ ಟೆಸ್ಟ್ ಸೇರಿದಂತೆ ಇನ್ನಿತರ ತಪಾಸಣೆ ನಡೆಸಲಾಯಿತು. ಯಾವುದೇ ಅಹಿತಕರ ಘಟನೆಯನ್ನು ತಡೆಯಲು ಬೌರಿಂಗ್ ಆಸ್ಪತ್ರೆ ಬಳಿ ಕೆಎಸ್‌ಆರ್‌ಪಿಯ ಒಂದು ತುಕಡಿ ನಿಯೋಜನೆ ಮಾಡಲಾಗಿತ್ತು. ಅಲ್ಲದೆ ತುರ್ತು ನಿಗಾ ಘಟಕದ ಮುಂಭಾಗದಲ್ಲಿಯೂ ಬ್ಯಾರಿಕೇಡ್ ಹಾಕಲಾಗಿತ್ತು. ಇದರಿಂದಾಗಿ ಆಸ್ಪತ್ರೆಗೆ ಬರುವ ಇತರೆ ರೋಗಿಗಳು ಪರದಾಡುವಂತಾಯಿತು. ಕೆಲ ರೋಗಿಗಳು ಎಮರ್ಜೆನ್ಸಿ ಅಂತಾ ಆಟೋದಲ್ಲಿ ಬಂದು ,ನಡೆಯುವುದಕ್ಕೆ ಆಗುವುದಿಲ್ಲ , ವಾಹನವನ್ನು ಒಳಗೆ ಬಿಡಿ ಎಂದು ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್ ಗೆ ಕೇಳಿಕೊಂಡಿದ್ದಾರೆ . ಆದರೂ ಅವ್ರಿಗೆ ಗೇಟ್ ಬಳಿಯೇ ತಡೆದ ಗಾರ್ಡ್ಸ್ , ನಡೆದುಕೊಂಡು ಹೋಗಿ ಎಂದಿದ್ದಾರಂತೆ. ಅಲ್ಲದೆ ಆಸ್ಪತ್ರೆ ಸಿಬ್ಬಂದಿ, ಸಾಮಾನ್ಯ ರೋಗಿಗಳನ್ನೂ ಒಳಗೆ ಬಿಡುತ್ತಿಲ್ಲ ಎಂದು ರೋಗಿಗಳು ಅಲವತ್ತುಕೊಂಡಿದ್ದಾರೆ.
ವೃದ್ಧರನ್ನೂ ಕೂಡ ಪೊಲೀಸರು ಗೇಟ್ ಬಳಿ ತಡೆದು ವಾಪಸ್ ಕಳಿಸಿರುವ ಘಟನೆ ನಡೆದಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ಎಚ್ಛೆತ್ತುಕೊಂಡು ರೋಗಿಗಳಿಗೆ ತೊಂದರೆ ಆಗದಂತೆ ನಿಗಾ ವಹಿಸಿದ್ದಾರೆ. ನಂತರ ಸೆಕ್ಯೂರಿಟಿ ಮುಖ್ಯ ಗೇಟ್ ತೆರೆದು ಎಂದಿನಂತೆ ರೋಗಿ ಮತ್ತು ಕುಟುಂಬದವರಿಗೆ ಆಸ್ಪತ್ರೆಗೆ ಹೋಗಲು ಅವಕಾಶ ಮಾಡಿಕೊಟ್ಟರು.
ಎಸ್‌ಐಟಿ ಅಧಿಕಾರಿಗಳು ನಿನ್ನೆ ತಡರಾತ್ರಿ 12.40 ಕ್ಕೆ ಜರ್ಮನಿಯಿಂದ ಬಂದ ಪ್ರಜ್ವಲ್ ರೇವಣ್ಣರನ್ನು ಕೆಂಪೇಗೌಡ ಅಂತರಾಷ್ರ್ಟ್ರೀಯ ವಿಮಾನ ನಿಲ್ದಾಣದಿಂದ ಬಂಧಿಸಿದ್ದರು. ತಡರಾತ್ರಿಯೇ ವಶಕ್ಕೆ ಪಡೆದು ,ಬಿಗಿ ಬಂದೋಬಸ್ತ್ ನಲ್ಲಿ SIT ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಇವತ್ತು ಶಿವಾಜಿನಗರದಲ್ಲಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಆದ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.