ಬೆಂಗಳೂರು: ಅಶ್ಲೀಲ ಪೆನ್ ಡ್ರೈವ್ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣಗೆ ಸಂಬಂಧಪಟ್ಟಂತೆ ಗೃಹ ಮಂತ್ರಿ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟು ದಿನ ಪ್ರಜ್ವಲ್ ರೇವಣ್ಣರ ಬಂಧನವಾಗಿರಲಿಲ್ಲ. ಆದರೀಗ ಪ್ರಜ್ವಲ್ ರೇವಣ್ಣ ಬಂಧನವಾಗಿದ್ದು, ಯಾರು ಕೂಡ ಭಯಪಡುವ ಅಗತ್ಯವಿಲ್ಲ. ಹೀಗಾಗಿ ಸಂತ್ರಸ್ತೆಯರು ನಿರ್ಭೀತಿಯಿಂದ ಪೊಲೀಸರು ಮತ್ತು SIT ಮುಂದೆ ಬಂದು ದೂರನ್ನು ಕೊಡಿ ಎಂದು ಮನವಿ ಮಾಡಿದ್ದಾರೆ. ನಮ್ಮ ಸರಕಾರ ನಿಮಗೆ ಎಲ್ಲ ರೀತಿಯಲ್ಲೂ ರಕ್ಷಣೆ ನೀಡುತ್ತದೆ ಎಂದು ಹೇಳಿದ್ದಾರೆ.
ವಿಚಾರಣೆಗೆ ಪ್ರಜ್ವಲ್ ಸಹಕರಿಸುತ್ತಿದ್ದಾರಾ ಅನ್ನೋ ಪ್ರಶ್ನೆಗೆ , SIT ಅಧಿಕಾರಿಗಳು ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಅಧಿಕಾರಿಗಳಿಗೆ ಅವರು ಸಹಕಾರ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸಹಜವಾಗಿಯೇ ಅವರು ತನಿಖೆಗೆ ಸಹಕಾರ ಕೊಡಬೇಕು ಎಂದರು . ಹಾಗೇನೇ ಆರೋಪಿ ಪ್ರಜ್ವಲ್ ರೇವಣ್ಣ ತನ್ನ ಮೊಬೈಲ್ ಕಳೆದು ಹೋಗಿದೆ ಎಂದಿದ್ದು, ಸಾಕ್ಷ್ಯ ನಾಶ ಮಾಡಿದ್ದಾರೆ ಅಂತ SIT ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ ಅನ್ನೋ ಪ್ರಶ್ನೆಗೆ ಈ ವಿಚಾರ ನನಗೆ ಗೊತ್ತಿಲ್ಲ. SIT ಅಧಿಕಾರಿಗಳು ನನಗೆ ಈ ಬಗ್ಗೆ ಮಾಹಿತಿ ನೀಡಿಲ್ಲ, ಬೇರೆ ಮೂಲದಿಂದ ಮಾಹಿತಿ ಬಂದರೆ ಅದನ್ನು ನಾನು ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ರು.
ಬಂಧನ ತುಂಬಾ ವಿಳಂಬವಾಯ್ತು ಅನ್ನೋ ಪ್ರಶ್ನೆಗೆ, ಪ್ರಜ್ವಲ್ ರೇವಣ್ಣ ನಮ್ಮ ದೇಶದಲ್ಲೇ ಇದ್ದಿದ್ದರೆ ಅಥವಾ ಬೇರೆ ಯಾವುದೇ ರಾಜ್ಯದಲ್ಲಿಯೇ ಇದ್ದಿದ್ದರೆ , ಅಧಿಕಾರಿಗಳಿಗೆ , ಪೊಲೀಸರಿಗೆ ಕಳಿಸಿ ಪ್ರಜ್ವಲ್ ರನ್ನು ಬೇಗನೆ ಅರೆಸ್ಟ್ ಮಾಡಿಸಬಹುದಿತ್ತು.ಆದರೆ ವಿದೇಶದಲ್ಲಿ ಇದ್ದ ಕಾರಣ ನಮ್ಮ ಪೊಲೀಸರು ಅಥವಾ ಸೀನಿಯರ್ ಅಧಿಕಾರಿಗಳನ್ನು ಕಳಿಸಿ ಅರೆಸ್ಟ್ ಮಾಡಲು ಸಾಧ್ಯವಿರಲಿಲ್ಲ. ಅವರು ವಿದೇಶಕ್ಕೆ ಪಲಾಯನ ಮಾಡಿದ್ದರಿಂದಾಗಿ ಅಂತರಾಷ್ಟ್ರೀಯ ಕಾನೂನು ಇರುತ್ತೆ. ಅದನ್ನು ಫಾಲೋ ಮಾಡಿಕೊಂಡು ಸಿಬಿಐ , ಇಂಟರ್ಪೋಲ್ ಮುಖಾ೦ತರ ಕಾನೂನು ಪ್ರಕ್ರಿಯೆ ಮುಗಿಸಿದ್ದೇವೆ. ಅಲ್ಲದೇ ರಾಜತಾಂತ್ರಿಕ ಪಾಸ್‍ಪೋರ್ಟ್ ಕೂಡ ರದ್ದಾಗುತ್ತೆ ಅಂತ ತಿಳಿದುಕೊಂಡು, ಅವರೇ ಮರಳಿ ಬಂದಿರಬಹುದು ಎಂದು ಜಿ. ಪರಮೇಶ್ವರ್ ಹೇಳಿದರು . ಅಲ್ಲದೆ ಮೈಸೂರಿನ ಕೆ ಆರ್ ನಗರ ಮಹಿಳೆಯ ಅಪಹರಣ ಪ್ರಕರಣದಲ್ಲಿ ಸಾ.ರಾ. ಮಹೇಶ್ ಹೆಸರು ಕೂಡ ಕೇಳಿ ಬಂದಿದ್ದು, ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.