ಬೆಂಗಳೂರು: ಮೈಸೂರಿನ ಕೆ.ಆರ್. ನಗರ ಸಂತ್ರಸ್ತೆ ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಕಳೆದ 15 ದಿನಗಳಿಂದ ಯಾರ ಕೈಗೂ ಸಿಗದೇ ನಾಪತ್ತೆಯಾಗಿರುವ ಭವಾನಿ ರೇವಣ್ಣರನ್ನು ಬಂಧಿಸಲು ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಭವಾನಿ ರೇವಣ್ಣರ ಪತ್ತೆಗಾಗಿ ಪೊಲೀಸರ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ.

ಈ ತಂಡ ಬೆಂಗಳೂರು, ಮೈಸೂರು, ಹಾಸನ ಈ ಮೂರೂ ಜಿಲ್ಲೆಗಳಲ್ಲಿ ಭವಾನಿ ರೇವಣ್ಣಗಾಗಿ ಹುಡುಕಾಟ ನಡೆಸಲಿದೆ. ನಾಲ್ಕನೇಯದಾಗಿ ಟೆಕ್ನಿಕಲ್ (ತಾಂತ್ರಿಕ )ತಂಡವನ್ನು ರಚಿಸಲಾಗಿದ್ದು, ಈ ಮೂಲಕ ಭವಾನಿ ಎಲ್ಲಿದ್ದಾರೆ, ಯಾರದ್ದಾದರೂ ಸಂಪರ್ಕದಲ್ಲಿದ್ದಾರಾ? ಅಂತ ಅವರ ಲೊಕೇಶನ್ ನ್ನು ಟ್ರ್ಯಾಕ್ ಮಾಡಲಾಗುತ್ತಿದ್ದು, ಟವರ್ ಡಂಪ್ ಲೊಕೇಷನ್, ಸಿಡಿಆರ್ ಪರಿಶೀಲನೆ ನಡೆಸಲಾಗುತ್ತಿದೆ.

ಭವಾನಿ ರೇವಣ್ಣಗೆ SIT ಅಧಿಕಾರಿಗಳು ಬಂಧನ ವಾರಂಟ್ ಜಾರಿ ಮಾಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ಅನೇಕ ಬಾರಿ ಭವಾನಿ ರೇವಣ್ಣಗೆ, SIT ಕಚೇರಿಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ನೋಟೀಸ್ ನೀಡಿದ್ದರು. ಆದರೆ ತನಗೆ ಮಂಡಿ ನೋವಿನ ಸರ್ಜರಿ ಆಗಿದ್ದು ಇತರೆ ಆರೋಗ್ಯ ಸಮಸ್ಯೆ ಇರುವುದರಿಂದ ವಿಚಾರಣೆಗೆ ಬರಲು ಸಾಧ್ಯವಿಲ್ಲ ಎಂದು ತಪ್ಪಿಸಿಕೊಳ್ಳುತ್ತಿದ್ದರು. ಅಲ್ಲದೇ ಎಸ್ ಐಟಿ ತನಿಖೆಗೆ ತಾನು ಸಂಪೂರ್ಣ ಸಹಕಾರ ನೀಡುತ್ತೇನೆ , ವಿಚಾರಣೆಗೆ ಹಾಜರಾಗುತ್ತೇನೆ , ಎಲ್ಲಿಯೂ ಓಡಿ ಹೋಗಲ್ಲ ಎಂದು ಹೇಳುತ್ತಿದ್ದ ಭವಾನಿ, ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರವಾಗುತ್ತಿದ್ದಂತೆ ಅಜ್ಞಾತ ಸ್ಥಳಕ್ಕೆ ಹೋಗಿ ತಲೆಮರೆಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಭವಾನಿ ರೇವಣ್ಣ ಸಂಬಂಧಿಕರ ಮನೆಯಲ್ಲಿ ಅಡಗಿ ಕುಳಿತಿರಬಹುದು ಅನ್ನೋ ಮಾಹಿತಿ ಲಭ್ಯವಾಗಿದೆ. ಒಟ್ನಲ್ಲಿ ಎಸ್ ಐ ಟಿ ಯಾವುದೇ ಕ್ಷಣದಲ್ಲಿ ಮಾಜಿ ಸಚಿವ HD ರೇವಣ್ಣ ಪತ್ನಿ ಭವಾನಿಯವರನ್ನು ಬಂಧಿಸುವ ಸಾಧ್ಯತೆಯಿದೆ.