ಚಿಕ್ಕಮಗಳೂರು: ವೀಕೆಂಡ್ ಬಂದ್ರೆ ಸಾಕು, ಚಿಕ್ಕಮಗಳೂರಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತೆ. ಹೇಳಿಕೇಳಿ ಚಿಕ್ಕಮಗಳೂರು ಪ್ರವಾಸಿಗರ ಸ್ವರ್ಗ..ಅದ್ರಲ್ಲೂ ಮಳೆಗಾಲದಲ್ಲಂತೂ ಚಿಕ್ಕಮಗಳೂರಿನ ಪ್ರಕೃತಿ ಸೊಬಗು ನೋಡೋದೆ ಖುಷಿ. ಹಾಗಾಗಿ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳ ಮನಮೋಹಕ ದೃಶ್ಯವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ಬರ್ತಾರೆ. ಆದ್ರೆ ಕೆಲ ಪ್ರವಾಸಿಗರು ಮೋಜು ಮಸ್ತಿ ಹೆಸರಲ್ಲಿ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಕೆಲಸ ಮಾಡ್ತಾರೆ. ಈ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದ್ರೂ ಕ್ಯಾರೇ ಎನ್ನದ ಪ್ರವಾಸಿಗರಿಗೆ ಬಿಸಿ ಮುಟ್ಟಿಸಲು ಸ್ವತಃ ಎಸ್ಪಿಯವರೇ ಫೀಲ್ಡ್‌ಗಿಳಿದಿದ್ದಾರೆ.

ಹೌದು ಇಂದು ಬೆಳ್ಳಂಬೆಳಿಗ್ಗೆ ಚಿಕ್ಕಮಗಳೂರಿನಲ್ಲಿ ಪ್ರವಾಸಿಗರಿಗೆ ಪೊಲೀಸರಿಂದ ಬಿಗ್ ಶಾಕ್ ಎದುರಾಯ್ತು. ಪ್ರವಾಸಿಗರ ಮೋಜು ಮಸ್ತಿಗೆ ಬ್ರೇಕ್ ಹಾಕಲು ಎಸ್ಪಿ ವಿಕ್ರಂ ಅಮಟೆ ಫೀಲ್ಡ್‌ಗೆ ಇಳಿದಿದ್ರು. ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್ ಪೋಸ್ಟ್ ನಲ್ಲಿ ಮದ್ಯ ತೆಗೆದುಕೊಂಡು ಹೋಗ್ತಿದ್ದ 20ಕ್ಕೂ ಹೆಚ್ಚು ವಾಹನಗಳನ್ನ ಸೀಜ್ ಮಾಡಲಾಗಿದೆ. ವಾಹನದಲ್ಲಿದ್ದ ಪ್ರವಾಸಿಗರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಬೆಳಗ್ಗೆಯಿಂದ ನಲವತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಇನ್ನು ಕಾರ್ ಮುಂಭಾಗದಲ್ಲಿ ಹ್ಯಾಟ್ ಇಟ್ಟು ಟೂರ್ ಗೆ ಬಂದಿದ್ದ ಅಬಕಾರಿ ಇನ್ಸ್ ಪೆಕ್ಟರ್‌ಗೂ ಎಸ್ಪಿ ಕ್ಲಾಸ್ ತೆಗೆದುಕೊಂಡ್ರು. ಹಾಗೇ ಪ್ಲಾಸ್ಟಿಕ್ ವಾಟರ್ ಬಾಟಲ್, ಗುಟ್ಕಾ, ಸಿಗರೇಟ್ ಸೀಜ್ ಮಾಡಲಾಗಿದೆ. ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಹೋಗುವ ಮಾರ್ಗದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.