ಚಿಕ್ಕಮಗಳೂರು: ಈ ಊರಲ್ಲಿ ಯಾರ ಮನೆಗೆ ಹೋಗಿ ನೋಡಿದ್ರೂ ಅಲ್ಲಿ ಒಬ್ರಲ್ಲ ಒಬ್ಬರು ಅನಾರೋಗ್ಯಕ್ಕೆ ತುತ್ತಾಗಿರೋರು ಕಾಣ್ತಾರೆ. ಕೆಲವು ಮನೆಗಳಲ್ಲಂತೂ ಇಡೀ ಮನೆ ಮಂದಿಯೇ ಹಾಸಿಗೆ ಹಿಡಿದಿದ್ದಾರೆ. ಕೈ ಕಾಲುಗಳು ಊದಿಕೊಂಡು, ಏಳೋಕೂ ಆಗದೇ ಕೂರೋಕೂ ಆಗದೇ ನರಕಯಾತನೆ ಅನುಭವಿಸ್ತಾ ಇದ್ದಾರೆ. ಇಡೀ ಊರಿಗೆ ಊರೇ ಸಾಂಕ್ರಾಮಿಕ ರೋಗಕ್ಕೆ ತತ್ತರಿಸಿ ಹೋಗಿದೆ.

ಹೌದು ಇದು ಚಿಕ್ಕಮಗಳೂರು ತಾಲೂಕಿನ ದೇವಗೊಂಡನಹಳ್ಳಿ ಗ್ರಾಮ. ಈ ಗ್ರಾಮದಲ್ಲಿ ಕಳೆದೆರಡು ತಿಂಗಳಿನಿಂದ ಇಡೀ ಊರಿನ ಮಂದಿ ವೈರಲ್ ಜ್ವರದಿಂದ ಬಳಲುತ್ತಿದ್ದಾರೆ. ಆರೋಗ್ಯ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ದೇವಗೊಂಡನಹಳ್ಳಿ ಗ್ರಾಮಸ್ಥರು ಪರಿತಪಿಸುವಂತಾಗಿದೆ. ಇಡೀ ಗ್ರಾಮವನ್ನೇ ಚಿಕನ್ ಗುನ್ಯಾ, ಡೆಂಗ್ಯೂ ಮಾದರಿಯ ರೋಗ ಆವರಿಸಿದೆ. ಗ್ರಾಮದಲ್ಲಿ 500 ಮನೆಗಳ ಪೈಕಿ ಸಾವಿರಕ್ಕೂ ಹೆಚ್ಚು ಜನ ಜ್ವರದಿಂದ ಬಳಲುತ್ತಿದ್ದಾರೆ.

ಗ್ರಾಮದ ಚರಂಡಿ, ಡ್ರಮ್ ನೀರಿನಲ್ಲಿ ಲಾರ್ವ, ಮೊಟ್ಟೆಗಳು ಪತ್ತೆಯಾಗಿದೆ. ಇಡಿ ಗ್ರಾಮವೇ ರೋಗಗ್ರಸ್ತವಾಗಿದ್ದು, ಮನೆಯಲ್ಲಿ ಯಾರನ್ನ ಯಾರೂ ಆರೈಕೆ ಮಾಡುವ ಸ್ಥಿತಿಯಲ್ಲೇ ಇಲ್ಲ. ಹಲವರು ಕೈ ಕಾಲು ಊತ, ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಇನ್ನು ಕಳಸಾಪುರ, ಸಿಂದಿಗೆರೆ ಸೇರಿ ಹಲವು ಗ್ರಾಮಗಳಲ್ಲಿ ಇದೇ ಸ್ಥಿತಿ ಇದೆ. ಒಂದು ತಿಂಗಳಿಂದ ಬಿಡದೇ ಕಾಡ್ತಿರೋ ಈ ಸಾಂಕ್ರಾಮಿಕ ರೋಗದಿಂದ ಇಡೀ ಗ್ರಾಮವೇ ಕಂಗಾಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಗ್ರಾಮವನ್ನ ರೋಗಮುಕ್ತವಾಗಿಸಬೇಕಿದೆ.