ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗ್ತಿದ್ದು, ನಿನ್ನೆ ರಾತ್ರಿ ಸತತವಾಗಿ ಸುರಿದ ಮಳೆಯಿಂದಾಗಿ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು ಏಳು ಮಂದಿ ದುರ್ಮರಣ ಹೊಂದಿದ್ದಾರೆ. ಸುಮಾರು ಹದಿನೈದಕ್ಕೂ ಅಧಿಕ ಮಂದಿ ಮಣ್ಣಿನಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ರಕ್ಷಣಾ ತಂಡ ಓರ್ವನ ಮೃತದೇಹ ಹೊರತೆಗೆದಿದೆ. ಶಾಂತಿ ನಾಯ್ಕ ಎಂಬುವವರ ಮೃತದೇಹವನ್ನು ಮಣ್ಣಿನಿಂದ ಹೊರತೆಗೆಯಲಾಗಿದೆ. ರಕ್ಷಣಾ ಕಾರ್ಯಚರಣೆ ಮುಂದುವರೆದಿದ್ದು ಮಳೆ ತೊಡಕುಂಟು ಮಾಡ್ತಿದೆ.

ರಾಷ್ಟ್ರೀಯ ಹೆದ್ದಾರಿ 66 ಅಂಕೋಲಾ- ಕುಮಟಾ ಮಾರ್ಗದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದು ಬಿದ್ದಿದೆ. ಲಾರಿ ಸೇರಿದಂತೆ ಕೆಲವು ವಾಹನಗಳು ಮಣ್ಣಿನ ಅಡಿ ಸಿಲುಕಿರುವ ಸಾಧ್ಯತೆ ಇದೆ. ಅಲ್ಲದೇ ನದಿಯಲ್ಲಿ ಗ್ಯಾಸ್ ಟ್ಯಾಂಕರ್ ಒಂದು ತೇಲಿ ಹೋಗಿದೆ ಎಂದು ಹೇಳಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯಲ್ಲೂ ವಾಹನಗಳು ಸಾಲುಗಟ್ಟಿ ನಿಂತಿವೆ. ಇನ್ನು ಕೂಡಾ ಗುಡ್ಡ ಕುಸಿತವಾಗುವ ಸಾಧ್ಯತೆ ಇದೆ.

ಇನ್ನು ಶಿರಸಿ ತಾಲೂಕಿನಲ್ಲಿ ರಾತ್ರಿ ಸುರಿದ ಭಾರೀ ಮಳೆಗೆ ಶಿರಸಿ- ಕುಮಟಾ ರಸ್ತೆಯ ದೇವಿಮನೆ ಮತ್ತು ರಾಗಿ ಹೊಸಳ್ಳಿ ನಡುವೆ ನಡು ರಾತ್ರಿ ಗುಡ್ಡ ಕುಸಿದಿದ್ದು, ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ರಸ್ತೆ ಬ್ಲಾಕ್ ಆಗಿ ಬೆಂಗಳೂರಿನಿಂದ ಕರಾವಳಿಗೆ ತೆರಳುವ ಬಸ್ ಗಳು ನಿಂತಿದ್ದು, ಪ್ರಯಾಣಿಕರು ರಸ್ತೆಯಲ್ಲೇ ಕಾಲ ಕಳೆಯುವಂತಾಗಿದೆ. ರಸ್ತೆ ಕಾಮಗಾರಿ ನಿರ್ವಹಿಸಿಕೊಂಡ ಆರ್. ಎನ್. ಎಸ್ ಕಂಪನಿ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಶಿರಸಿ ತಹಸೀಲ್ದಾರ್ ಸೇರಿ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರಿಸಿದ ಪರಿಣಾಮ ಕರಾವಳಿ ಸಂಪರ್ಕ ಕಲ್ಪಿಸುವ ರಸ್ತೆಗಳು ಗುಡ್ಡ ಕುಸಿತದಿಂದ ಬಂದ್ ಆಗಿವೆ.

ಹೊನ್ನಾವರದ ವರ್ನಕೇರಿ ಬಳಿ ಗುಡ್ಡ ಕುಸಿತದಿಂದ ಹೊನ್ನಾವರದಿಂದ ಸಾಗರ, ಬೆಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿತ್ತು. ರಸ್ತೆ ಸಂಚಾರಕ್ಕೆ ತೊಂದರೆಯಾಗಿತ್ತು. ಸಾರ್ವಜನಿಕರ ಸಹಕಾರದಿಂದ ರಸ್ತೆಯನ್ನು ತೆರವುಗೊಳಿಸುವ ಕಾರ್ಯ ಆರಂಭವಾಗಿದೆ.