ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಜೋರಾಗಿದೆ. ಭಾರೀ ಮಳೆ ಹಿನ್ನೆಲೆ ಚಿಕ್ಕಮಗಳೂರು ಪ್ರವಾಸವನ್ನೇ ಮುಂದೂಡುವಂತೆ ಜಿಲ್ಲಾಡಳಿತ ಈಗಾಗಲೇ ಸೂಚನೆ ನೀಡಿದೆ. ಒಂದು ವಾರದವರೆಗೂ ಜಿಲ್ಲೆಗೆ ಬಾರದಂತೆ ಪ್ರವಾಸಿಗರಿಗೆ ಜಿಲ್ಲಾಡಳಿತ ಮನವಿ ಮಾಡಿದೆ. ತುಂಗಾ-ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ನದಿ ತೀರ, ತಗ್ಗುಪ್ರದೇಶ ಸೇರಿದಂತೆ ಅಪಾಯಕಾರಿ ಸ್ಥಳಕ್ಕೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಬಹುತೇಕ ಹಳ್ಳ-ಕೊಳ್ಳಗಳು, ಕೆರೆಗಳು ಕೂಡ ಭರ್ತಿಯಾಗಿವೆ. ಹಲವೆಡೆ ಭೂ ಕುಸಿತ, ಗುಡ್ಡ ಕುಸಿತ ಪ್ರಕರಣಗಳು ಹೆಚ್ಚಾಗ್ತಿವೆ.

ಇನ್ನು ಶೃಂಗೇರಿ ಸುತ್ತಮುತ್ತಲಿನ ಭಾಗದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಶೃಂಗೇರಿ ತಾಲೂಕಿನ ನೆಮ್ಮಾರಿನ ತೂಗು ಸೇತುವೆ ಕುಸಿತಗೊಂಡಿದೆ. ಸುಮಾರು ಐದಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹೊಳೆಹದ್ದು ಸೇತುವೆ ಕುಸಿದಿದ್ದು, ಗ್ರಾಮದ ಜನ ಹೊರಗೆ ಬರಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳ ಪಾಡಂತೂ ಕೇಳೋರೆ ಇಲ್ಲ. ಸೇತುವೆ ದುಸ್ಥಿತಿ ಬಗ್ಗೆ ಗಮನಕ್ಕೆ ತಂದಿದ್ದರೂ ಸ್ಪಂದಿಸದ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಕುದುರೆಮುಖ ವ್ಯಾಪ್ತಿಯ ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗ್ತಿದೆ. ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ನಿನ್ನೆ ಕೆಲ ಗಂಟೆಗಳ ಕಾಲ ಮಾತ್ರ ಮುಳುಗಿದ್ದು, ಇವತ್ತು ಮತ್ತೆ ಮುಳುಗಡೆಯಾಗಿರೋದು ಕಂಡುಬಂದಿದೆ. ಸೇತುವೆ ಮುಳುಗಡೆಯಿಂದಾಗಿ ಹೊರನಾಡು-ಕಳಸ ಸಂಪರ್ಕ ಕಡಿತಗೊಂಡಿದೆ. ಮುನ್ನೆಚ್ಚರಿಕೆ ಹಿನ್ನೆಲೆ ಸೇತುವೆಯ 2 ಕಡೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಈಗಾಗಲೇ ಪೊಲೀಸರು ಹೆಬ್ಬಾಳೆ ಸೇತುವೆ ಮೇಲೆ ವಾಹನ ಸಂಚಾರ ನಿಷೇಧಿಸಿದ್ದಾರೆ.