ಹಾಸನ: ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಭಾರೀ ಮಳೆಯಿಂದ ಚಾಲಕನ ನಿಯಂತ್ರಣ ತಪ್ಪಿದ ಪಿಕ್ ಅಪ್ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಹಳ್ಳಕ್ಕೆ ಬಿದ್ದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ, ಬೆಳಗೋಡು ಹೋಬಳಿ ಕಟ್ಟೆಪುರ ಗ್ರಾಮದಲ್ಲಿ ನಡೆದಿದೆ.
ವಾಹನ ಡಿಕ್ಕಿ ಹೊಡೆದ ರಭಸಕ್ಕೆ ನಾಲ್ಕೈದು ವಿದ್ಯುತ್ ಕಂಬಗಳು ಧರೆಗುರುಳಿವೆ. ಎಳನೀರು ತುಂಬಿಕೊಂಡು ಸಕಲೇಶಪುರದ ಕಡೆಗೆ ತೆರಳುತ್ತಿದ್ದ ಪಿಕ್ ಅಪ್ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುತ್ತಿದ್ದಂತೆ ರಸ್ತೆಗೆ ಅಡ್ಡಲಾಗಿ ವಿದ್ಯುತ್ ತಂತಿಗಳು ಬಿದ್ದಿವೆ. ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬೆಳಗೋಡಿನಿಂದ ಸಕಲೇಶಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಘಟನೆಯಲ್ಲಿ ಪಿಕ್‌ಅಪ್ ವಾಹನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬಿಟ್ಟರೆ ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.