ಚಿಕ್ಕಮಗಳೂರು: ಭಾರೀ ಮಳೆಯಿಂದ ಕಾಫಿನಾಡಲ್ಲಿ ಅವಾಂತರಗಳ ಮೇಲೆ ಅವಾಂತರ ನಡೀತಲೇ ಇದೆ. ಹೊರನಾಡು-ಶೃಂಗೇರಿಯ ಮುಖ್ಯರಸ್ತೆಯ ಬಸರೀಕಟ್ಟೆ ಸಮೀಪ ಧರೆ ಕುಸಿದು, ಮರಗಳು ರಸ್ತೆಗೆ ಉರುಳಿವೆ. ಹೀಗಾಗಿ ಹೊರನಾಡು-ಶೃಂಗೇರಿ ಮುಖ್ಯರಸ್ತೆಯ ಸಂಪರ್ಕ ಕಡಿತಗೊಂಡಿದೆ. ಮಣ್ಣು ಕುಸಿತದಿಂದ ಎರಡು ಕಡೆ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಮರಗಳನ್ನ ತೆರವುಗೊಳಿಸಲು ಸ್ಥಳೀಯರು ಪ್ರಯತ್ನ ಮಾಡಿದ್ರೂ ಮಣ್ಣನ್ನ ತೆರವು ಮಾಡಲು ಅಷ್ಟು ಸುಲಭವಾಗಿ ಸಾಧ್ಯವಾಗಲೇ ಇಲ್ಲ..

ಇನ್ನು ಶೃಂಗೇರಿಯಿಂದ ಹೊರನಾಡಿಗೆ ಹೋಗುವ ಮುಖ್ಯ ರಸ್ತೆ ಬಿಳಾಲುಕೊಪ್ಪ ಸಮೀಪದ ರಸ್ತೆಯ ಮೇಲೆಯೇ ನದಿಯಂತೆ ನೀರು ಹರಿಯುತ್ತಿದೆ. ರಸ್ತೆಯೋ ಹೊಳೆಯೋ ಎಂಬಂತೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದು ಮಲೆನಾಡಿನಲ್ಲಿ ಸುರಿಯುತ್ತಿರುವ ರಣಭೀಕರ ಮಳೆ ಸೃಷ್ಟಿಸಿದ ಅವಾಂತರ. ಬಸರೀಕಟ್ಟೆ ಇಂದ ಸೋಮೇಶ್ವರ್ ಖಾನ್ ಹೋಗುವ ರಸ್ತೆ ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಹೀಗೆ ರಸ್ತೆಯ ಮೇಲೆಯೇ ನೀರು ಹರಿಯುತ್ತಿದೆ. ಇದನ್ನೆಲ್ಲಾ ನೋಡ್ತಿದ್ರೆ 2019 ರಲ್ಲಿ ಮಳೆಯಿಂದಾದ ಅನಾಹುತ ಮತ್ತೆ ಮರುಕಳಿಸುವಂತಿದೆ. 2019 ರಲ್ಲಿ ಹಿಂದೆಂದೂ ಕಂಡರಿಯದಂತಹ ಮಳೆಯಾಗಿ ಸಾಕಷ್ಟು ಅನಾಹುತಗಳಾಗಿದ್ವು. ಇದೀಗ ಮತ್ತೆ ಮಳೆ ಅದೇ ರೀತಿ ತನ್ನ ಆರ್ಭಟವನ್ನು ತೋರುತ್ತಿದ್ದು, ಬಿಡುವಿಲ್ಲದೇ ಸುರಿಯುತ್ತಿರುವ ಮಳೆಗೆ ಮಲೆನಾಡಿನ ಜನ ಜೀವ ಉಳಿಸಿಕೊಂಡರೆ ಸಾಕಪ್ಪಾ ಎನ್ನುವಂತಾಗಿದೆ. ಅದೆಷ್ಟೋ ಮನೆಗಳು ಕುಸಿದಿದೆ. ಭೂಕುಸಿತವುಂಟಾಗಿ ಸಾಕಷ್ಟು ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಕಂಬಗಳು ಧರೆಗುರುಳಿದ್ದು ಕರೆಂಟಿಲ್ಲದೇ ಜನ ಕತ್ತಲೆಯಲ್ಲೇ ಕೂರುವಂತಾಗಿದೆ. ಅದೆಷ್ಟೋ ಗ್ರಾಮಗಳು ಸಂಪರ್ಕಕ್ಕೆ ಸಿಗದಂತಾಗಿವೆ. ಒಟ್ಟಾರೆ ಮಲೆನಾಡಿನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು. ಮಳೆರಾಯ ಬಿಡುವು ಕೊಡಲೆಂದು ಪ್ರಾರ್ಥಿಸ್ತಾ ಇದ್ದಾರೆ.