ಬೆಂಗಳೂರು : ಮುಡಾ ಹಗರಣ ಸಂಬಂಧ ಅರ್ಜಿಯಲ್ಲಿ ವೈಟ್ನರ್ ಹಾಕಿ ಅಳಿಸಿದ್ದಾರೆಂಬ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ವೈಟ್ನರ್ ಹಿಂದಿನ ಅಸಲಿಯತ್ತು ಇದು ಅಂತ ದಾಖಲೆ ಬಿಡುಗಡೆ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಸರ್ಕಾರಿ ಭೂಮಿ ಲಪಟಾಯಿಸಿ ಟಾರ್ಚ್ ಬಿಟ್ಟುಕೊಂಡು ನೋಡ್ತಿದ್ದಾರೆಂದು ಲೇವಡಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಮುಖ್ಯಮಂತ್ರಿಗೆ ಮಾಡಿದ ತಪ್ಪಿನ ಅರಿವಿಲ್ಲ. ಆ ಜಾಗ ಯಾರದ್ದು? ಅವರ ಹೆಂಡತಿಯದ್ದಾ? ಅವರ ಬಾಮೈದನದ್ದಾ? ಸರ್ಕಾರಿ ಭೂಮಿ ಲಪಟಾಯಿಸಿ ಈಗ ಟಾರ್ಚ್ ಬಿಟ್ಟು ನೋಡುವ ಪರಿಸ್ಥಿತಿ ಬಂದಿದೆ.
ಮೊದಲು ಆ ಜಾಗ ಯಾರದ್ದು ಅಂತ ಹೇಳಲಿ. ನಂತರ ವಿಪಕ್ಷಗಳ ವಿರುದ್ಧ ಆರೋಪ ಮಾಡಲಿ. ಟಾರ್ಚ್ ಹಾಕೊಂಡು ಹುಡುಕುವ ಪರಿಸ್ಥಿತಿ ಅವರಿಗೆ ಬೇಕಿತ್ತಾ ಎಂದು ವ್ಯಂಗ್ಯವಾಡಿದರು. ವಿಪಕ್ಷಗಳು ದ್ವೇಷದ ಕನ್ನಡಕ ಕಳಚಿಟ್ಟು ನೋಡಲಿ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವ್ರು, ದ್ವೇಷ ಮಾಡುತ್ತಿರೋದು ಅವರು. ಪೊಲೀಸ್ ಇಲಾಖೆಯನ್ನು ಇಟ್ಟುಕೊಂಡು ಏನೇನು ಮಾಡುತ್ತಿದ್ದಾರೆ ಅನ್ನೋದು ಎಲ್ಲರಿಗೆ ಗೊತ್ತಿದೆ. ನಾನು ಕನ್ನಡಕ ಹಾಕೋದೇ ಇಲ್ಲ ಎಂದು ತಿರುಗೇಟು ನೀಡಿದರು.
ನೂರು ಜನ್ಮ ಎತ್ತಿ ಬಂದ್ರೂ ಏನೂ ಮಾಡೋದಕ್ಕಾಗಲ್ಲ. ನಾನು ಜೈಲಿಗೆ ಹೋಗೋದಕ್ಕೆ ಏನು ಮಾಡಿದ್ದೇನೆ?. ನನ್ನ ಬಗ್ಗೆ ಏನೇನು ದಾಖಲೆ ಇಟ್ಟುಕೊಂಡಿದ್ದಾರೋ ಎಲ್ಲವನ್ನೂ ಬಿಡುಗಡೆ ಮಾಡಲಿ. ನಾನು ಬೀದಿಯಲ್ಲಿ ನಿಂತಿದ್ದೇನೆ, ಅವ್ರು ಗಾಜಿನ ಮನೆಯಲ್ಲಿ ಕೂತಿದ್ದಾರೆ ಎಂದರು.



