ವನಗೂರು (ಸಕಲೇಶಪುರ) : ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟ ಡಿಮ್ಡ್ ಅರಣ್ಯದ ಹೆಸರಿನಲ್ಲಿ ರೈತರಿಗೆ ಕಿರುಕುಳ ನೀಡುತ್ತಿರುವ ಅರಣ್ಯ ಇಲಾಖೆದ ಕ್ರಮದ ವಿರುದ್ಧ ಸಮಾಜ ಸೇವಕ ಪ್ರತಾಪ್ ಗೌಡ ನೇತೃತ್ವದಲ್ಲಿ 300ಕ್ಕೂ ಹೆಚ್ಚು ರೈತರು ಸಕಲೇಶಪುರ ತಾಲೂಕಿನ ಬಾಚಿಹಳ್ಳಿ ಗ್ರಾಮದಲ್ಲಿ ಭಾನುವಾರ ಸಭೆ ನಡೆಸಿದರು
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ಎಚ್.ಎನ್. ವಿಶ್ವನಾಥ್, ಸಕಲೇಶಪುರ ತಾಲೂಕಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಡಿಮ್ಡ್ ಅರಣ್ಯದ ನೆಪ ಹೇಳಿ ರೈತರಿಗೆ ಕಿರುಕುಳ ನೀಡುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಕುಡಿಯುವ ನೀರು ಯೋಜನೆ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಸರ್ಕಾರದ ಅಭಿವೃದ್ಧಿ ಕೆಲಸ ಸಹ ಮಾಡಲು ಅರಣ್ಯ ಇಲಾಖೆ ಕಿರುಕುಳ ನೀಡುತ್ತಿದೆ. ಇದೇ ರೀತಿ ರೈತರು ಮೌನವಾಗಿದ್ದರೆ ನಮ್ಮ ಸಹಜ ಕಸುಬು ಕೃಷಿಯನ್ನು ಮಾಡಲು ಅರಣ್ಯ ಇಲಾಖೆ ಬಿಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಸಮಾಜ ಸೇವಕ ಪ್ರತಾಪ್ ಗೌಡ ಬಾಚಿಹಳ್ಳಿ ಮಾತನಾಡಿ, ಡಿಮ್ಡ್ ಅರಣ್ಯದ ಹೆಸರಿನಲ್ಲಿ ಕಂದಾಯ ಇಲಾಖೆ ಮಂಜೂರು ಮಾಡಿರುವ ಕೆಲ ಕಾಫಿ ತೋಟ, ಕೃಷಿ ಭೂಮಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಯನ್ನು ಕಳುಹಿಸಿ ಕಿರುಕುಳ ನೀಡುತ್ತಿರುವ ಪ್ರಸಂಗ ಹೆಚ್ಚುತ್ತಿದೆ. ಅರಣ್ಯ ಅಧಿಕಾರಿಗಳ ಕಿರುಕುಳ ಇದೇ ರೀತಿ ಮುಂದುವರಿದರೆ ಹೈಕೋರ್ಟ್‌ನಲ್ಲಿ ದೂರು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಇಂದಿನ ಅರಣ್ಯ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಕುಳಿತು ಮಾಡಿರುವ ಅವಜ್ಞಾನಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನೇ ಅರಣ್ಯ ಇಲಾಖೆ ದಾಖಲಾತಿ ಎನ್ನುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಹಾಗೂ ಸಕಲೇಶಪುರ ತಾಲೂಕು ತಹಶೀಲ್ದಾರ್‌ಗೆ ದೂರು ನೀಡಿ ಮುಂದಿನ ಹೋರಾಟ ರೂಪಿಸಲಾಗುವುದೆಂದು ತಿಳಿಸಿದರು.
ಹೋರಾಟ ಸಮಿತಿ ಅಧ್ಯಕ್ಷರಾಗಿ ಪ್ರತಾಪ್ ಗೌಡ ಅವರನ್ನು ಆಯ್ಕೆ ಮಾಡಲಾಯಿತು. ಕಾನೂನು ಸಮಿತಿ ಸದಸ್ಯರನ್ನಾಗಿ ವಕೀಲ ಬಿ.ಕೆ. ವಿಜಯಕುಮಾರ್ ಕುಮತ್ತಳ್ಳಿ, ಹೆತ್ತೂರು ವಾಣಿ ಅವರನ್ನು ಆಯ್ಕೆ ಮಾಡಲಾಯಿತು. ಏಲಕ್ಕಿ ಬೆಳೆಗಾರ ಸಂಘದ ಮಾಜಿ ಅಧ್ಯಕ್ಷ ಕುಶಲ್ ಗೌಡ, ಹೆತ್ತೂರು ಬೆಳೆಗಾರ ಸಂಘದ ಕಾರ್ಯದರ್ಶಿ ಶ್ರೀಧರ್, ಒಕ್ಕಲಿಗರ ಸಂಘದ ರಾಮಣ್ಣ, ದಲಿತ ಹೋರಾಟ ಸಮಿತಿಯ ಅಧ್ಯಕ್ಷ ರಾಮಚಂದ್ರ ಬ್ಯಾಗಡಹಳ್ಳಿ, ಸಕಲೇಶಪುರ ಪುರಸಭೆ ಮಾಜಿ ಸದಸ್ಯ ಸಲೀಂ ಇತರ ಪ್ರಮುಖರು ಉಪಸ್ಥಿತರಿದ್ದರು.



