ಚಿಕ್ಕಮಗಳೂರು : ತಮ್ಮ ಮನೆ ಹಾಗೂ ಜಮೀನಿಗೆ ತೆರಳುವುದಕ್ಕೆ ಇದ್ದ ರಸ್ತೆಯನ್ನು ಕುಟುಂಬ ಸಂಬಂಧಿಕರು ಬಂದ್ ಮಾಡಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಯುವಕನೊಬ್ಬ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ.
ಖಾಂಡ್ಯ ಹೋಬಳಿಯ ಹುಯಿಗೆರೆ ಗ್ರಾಮದ ಕೀರ್ತನ್ ಎಂಬವರು ತಮ್ಮ ಕುಟುಂಬ ಸಂಬಂಧಿಗಳ ಮೇಲೆ ಆರೋಪ ಮಾಡಿರುವ ವ್ಯಕ್ತಿ. ಗ್ರಾಮದ ಸರ್ವೆ ನಂಬರ್ 122ರಲ್ಲಿ ನಮ್ಮ ಮನೆಗೆ ತೆರಳುವುದಕ್ಕೆ ಮಣ್ಣಿನ ರಸ್ತೆ ಇದೆ. ಮನೆಗೆ ಹೋಗಬೇಕಾದರೆ ಇದೇ ದಾರಿಯಲ್ಲಿ ಸಾಗಬೇಕು. ಇದು ಬಿಟ್ಟು ಪರ್ಯಾಯ ಮಾರ್ಗವಿಲ್ಲ. ಮನೆ ಹಾಗೂ ಜಮೀನಿಗೆ ಬೇಕಾದ ಪರಿಕರಗಳನ್ನೆಲ್ಲ ಇದೇ ಮಾರ್ಗವಾಗಿ ಕೊಂಡೊಯ್ಯುತ್ತಿದ್ದೆವು. ಆದರೆ ನಮ್ಮ ತಂದೆಯ ಸಹೋದರ ಸಂಬಂಧಿಗಳಾದ ಎಚ್.ಇ. ಸಿದ್ದೇಗೌಡ್, ಎಚ್. ಇ. ಮಂಜುನಾಥ ಎಂಬವರು ರಸ್ತೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆಂದು ಆರೋಪಿಸಿದ್ದಾರೆ.
ನಾವು 30 ವರ್ಷಗಳಿಂದ ಇದೇ ಮಾರ್ಗವಾಗಿ ನಡೆದಾಡುತ್ತಿದ್ದೇವೆ. ಈಗ ಒತ್ತುವರಿ ಮಾಡಿಕೊಂಡು ನಮಗೆ ರಸ್ತೆ ಇಲ್ಲದ ಹಾಗೆ ಮಾಡುತ್ತಿದ್ದಾರೆ. ಅವರನ್ನು ಈ ಬಗ್ಗೆ ಪ್ರಶ್ನಿಸಿದರೆ ನಮಗೆ ಬೆದರಿಕೆ ಹಾಕುತ್ತಾರೆ. ತಹಸೀಲ್ದಾರ್, ಜಿಲ್ಲಾಧಿಕಾರಿಯವರಿಗೂ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ. ಸ್ಥಳ ಪರಿಶೀಲನೆ ಮಾಡಿರುವ ರಸ್ತೆ ಬಿಟ್ಟುಕೊಡುಂತೆ ಸೂಚಿಸಿದ್ದರೂ ಅದಕ್ಕೆ ಗೌರವ ಕೊಡುತ್ತಿಲ್ಲ. ಹೇಗಾದರು ಮಾಡಿ ನಮಗೆ ಓಡಾಡುವುದಕ್ಕೆ ರಸ್ತೆ ಬಿಟ್ಟು ಕೊಡಿಸುವಂತೆ ಅವರು ಮನವಿ ಮಾಡಿದ್ದಾರೆ.




