ಚಿಕ್ಕಮಗಳೂರು : ಮೂಡಿಗೆರೆ ತಾಲ್ಲೂಕಿನ ಭೈರಾಪುರ ವ್ಯಾಪ್ತಿಯ ಎತ್ತಿನಭುಜ, ಬಾಳೂರು ಮೀಸಲು ಅರಣ್ಯದ ಹಾದಿಯಲ್ಲಿ ಮೋಟಾರು ವಾಹನಗಳ Rally ನಡೆಸಿದ ಪ್ರಕರಣ ಸಂಬಂಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪರಿಸರ ಪ್ರೇಮಿಗಳು ಹಾಗೂ ವನ್ಯಜೀವಿ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು ಕಾನೂನು ಉಲ್ಲಂಘಿಸಿ Rally ಆಯೋಜನೆ ಮಾಡಿದ್ದರ ಕುರಿತಾಗಿ ವಿವರಣೆ ನೀಡಿದರು. ಯಾವುದೇ ಅನುಮತಿ ಪಡೆಯದೆ ಅಲ್ಲಿ ಗುಂಪುಗೂಡಿ ಪರಿಸರ ನಾಶ ಸೇರಿದಂತೆ ಅಲ್ಲಿನ ಪ್ರಶಾಂತ ವಾತಾವರಣಕ್ಕೆ ಧಕ್ಕೆ ತರಲಾಗಿದೆ. ಆನೆ ಕಾರಿಡಾರ್ ವ್ಯಾಪ್ತಿಯಲ್ಲಿ Rally ನಡೆಯಿತು. ಈಗಾಗಲೇ ಇಲ್ಲಿ ಆನೆ ಮತ್ತು ಮಾನವ ಸಂಘರ್ಷ ಮಿತಿಮೀರಿದೆ. ಇಂತಹ ಸೂಕ್ಷ್ಮ ಕಾಡಿನ ಪರಿಸರದಲ್ಲಿ ರಾಲಿ ಆಯೋಜನೆ ಮಾಡಿದವರ ವಿರುದ್ಧ ಅರಣ್ಯ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿತ್ತು ಆದರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಈ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಗಮನಕ್ಕೂ ಬಂದಿದ್ದು, ಕ್ರಮ ಕೈಗೊಳ್ಳುವಂತೆ ಆದೇಶ ಮಾಡಿದ್ದಾರೆ. ನೂರಾರು ಐಷಾರಾಮಿ ವಾಹನಗಳು ಇಲ್ಲಿ ಬಂದಿದ್ದು, ಬೆಂಗಳೂರು, ಸಕಲೇಶಪುರ, ಹಾಸನ, ತೀರ್ಥಹಳ್ಳಿ ಭಾಗಗಳಿಂದ ಜನರು ವಾಹನದೊಂದಿಗೆ ಬಂದು ಇಲ್ಲಿನ ಪರಿಸರವನ್ನು ಹಾಳು ಮಾಡಿದ್ದಾರೆ. ಈ ಸಂಬಂಧ ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮೂಡಿಗೆರೆಯ ಪರಿಸರ ಮತ್ತು ವನ್ಯಜೀವಿ ಕಾರ್ಯಕರ್ತರಾದ ವಿನೋದ್ ಕಣಚೂರು, ಪರಿಸರವಾದಿ ಯುವ ಪರಿಸರ ಲೇಖಕ ಕಾರ್ತಿಕ್ ಆದಿತ್ಯ ಬೆಳಗೊಡ್, ವೈಲ್ಡ್ ಕೇರ್ ಸಂಸ್ಥೆಯ ಮುಖ್ಯಸ್ಥ ಮಧು ಮುಕ್ತಿಹಳ್ಳಿ, ವನ್ಯಜೀವಿ ಪರಿಪಾಲಕ ವೀರೇಶ್ ಜಿ., ಪರಿಸರ ಕಾರ್ಯಕರ್ತರಾದ ಪ್ರದೀಪ್, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.




