ಬೆಂಗಳೂರು : ಸ್ಯಾಂಡಲ್‌ವುಡ್‌ನಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸುವಂತೆ Film industry for rights And Equality ನಿಯೋಗ ಸರ್ಕಾರವನ್ನು ಆಗ್ರಹಿಸಿದೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಟ ಚೇತನ್ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ. ಸ್ಯಾಂಡಲ್‌ವುಡ್‌ನಲ್ಲಿ ಮಹಿಳೆಯರಿಗೆ ಸುರಕ್ಷತೆ ಬೇಕು. ಈ ಹಿಂದೆ ಆಗಿರುವ ದೌರ್ಜನ್ಯದ ಬಗ್ಗೆ ತನಿಖೆಯಾಗಬೇಕು. ಆನಿಟ್ಟಿನಲ್ಲಿ ಸಮಿತಿ ರಚಿಸುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಸಿದ್ದರಾಮಯ್ಯ, ʼಕನ್ನಡ ಚಿತ್ರರಂಗದಲ್ಲೂ ಲೈಂಗಿಕ ದೌರ್ಜನ್ಯ ಆಗ್ತಿದ್ಯಾʼ ಅಂತ ಅಚ್ಚರಿಯಿಂದ ಪ್ರಶ್ನಿಸಿದ್ದಾರೆ. ಜತೆಗೆ ಇನ್ನೊಂದು ವಾರದಲ್ಲಿ ಪ್ರಮುಖರೊಂದಿಗೆ ಈ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.


ಭೇಟಿ ಬಳಿಕ ಪ್ರತಿಕ್ರಿಯಿಸಿದ ನಟ ಚೇತನ್, ಸಿದ್ದರಾಮಯ್ಯ ಅವರು ಲೋಹಿಯ ಸಿದ್ಧಾಂತವನ್ನು ನಂಬಿದವರು. ಅವರ ಮೇಲೆ ನಮಗೆ ನಂಬಿಕೆ ಇದೆ. ನಮ್ಮ ಬೇಡಿಕೆಗೆ ಸ್ಪಂದಿಸುವ ವಿಶ್ವಾಸವಿದೆ. ಮಾತ್ರವಲ್ಲ ಈ ವಿಚಾರವಾಗಿ ಸರ್ಕಾರಕ್ಕೆ ಇನ್ನೂ ಹೆಚ್ಚಿನ ರೀತಿ ಮನವರಿಕೆ ಮಾಡಿಕೊಡಲಾಗುವುದೆಂದು ಹೇಳಿದರು.
ಶೃತಿ ಹರಿಹರನ್ ಮಾತನಾಡಿ, ಸಮಿತಿ ರಚನೆ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇವೆ. ಒಂದು ವಾರದೊಳಗೆ ಮತ್ತೊಂದು ಮಾತುಕತೆ ನಡೆಸುತ್ತೇನೆಂದು ಹೇಳಿದ್ದಾರೆಂದು ತಿಳಿಸಿದರು.
ನಟಿ ನೀತು ಮಾತನಾಡಿ, ಕಲಾವಿದರು, ಸಿಬ್ಬಂದಿಗೆ ಸುರಕ್ಷಿತ ವಾತಾವರಣ ಇರಬೇಕೆಂಬುದು ನಮ್ಮ ಮನವಿ. ಯಾವುದೇ ರೀತಿಯ ದೌರ್ಜನ್ಯ ಆಗಬಾರದು. ಅದನ್ನು ತಡೆಯಬೇಕೆಂಬುದು ನಮ್ಮ ಕಳಕಳಿ ಎಂದರು.


