ಮಡಿಕೇರಿ : ದೇಶಾದ್ಯಂತ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಸಂಭ್ರಮೋಲ್ಲಾಸದಿಂದ ಆಚರಿಸಲಾಗಿದೆ. ಹಲವು ಕಡೆ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ತರಹೇವಾರಿ ಮಾದರಿಯ ಗಣೇಶ ಭಕ್ತರಿಂದ ಆರಾಧಿಸಲ್ಪಡುತ್ತಿದ್ದಾನೆ.
ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ಮೂರ್ತಿ ಈಗ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಯಾಕಂದ್ರೆ ಇಲ್ಲಿರೋದು ಸಾಮಾನ್ಯ ಗಣಪತಿ ಅಲ್ಲ… ಅಯೋಧ್ಯಾ ಗಣಪತಿ..! ಪ್ರತಿ ವರ್ಷ ವಿನೂತನತೆಯ ಗಣಪತಿಯ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸುವ ಮಡಿಕೇರಿಯ ಶಾಂತಿನಿಕೇತನ ಯುವಕ ಸಂಘ ಈ ಬಾರಿ ಈ ಹಿಂದಿನ ವರ್ಷಗಳಿಗಿಂತ ವಿಭಿನ್ನವಾಗಿ ಆಚರಿಸುವ ಮೂಲಕ ಜನಾಕರ್ಷಣೆಯ ಕೇಂದ್ರವಾಗಿದೆ.

ಕೋಟ್ಯಂತರ ಹಿಂದುಗಳು ಆರಾಧಿಸುವ ಶ್ರೀರಾಮನ ಜನ್ಮಸ್ಥಳ ಆಯೋಧ್ಯೆಯಲ್ಲಿ ಕೆಲವು ತಿಂಗಳ ಹಿಂದೆಯಷ್ಟೇ ರಾಮಲಲ್ಲನನ್ನು ಪ್ರತಿಷ್ಠಾಪಿಸಲಾಗಿತ್ತು. ಕರ್ನಾಟಕದ ಶಿಲ್ಪಿ ಯೋಗಿ ಅರುಣ್ ರಾಜ್ ಅವರು ಕೆತ್ತಿದ ಸುಂದರ ಬಾಲರಾಮನ ಮೂರ್ತಿ ಅಯೋಧ್ಯೆಯ ಪುಣ್ಯ ನೆಲದಲ್ಲಿ ಪ್ರತಿಷ್ಠಾನೆಯಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಈ ಬಾರಿಯ ಗಣೇಶೋತ್ಸವನ್ನು ಅಯೋಧ್ಯೆ ರಾಮಮಂದಿರದ ಪರಿಕಲ್ಪನೆಯಲ್ಲಿ ಆಚರಿಸಬೇಕೆಂದು ಅಂದುಕೊಂಡು ಇಲ್ಲಿನ ಯುವಕರ ತಂಡ ಅಯೋಧ್ಯೆಯ ಗರ್ಭಗುಡಿಯ ಮಾದರಿಯನ್ನು ತಮ್ಮ ಮಂಟಪದಲ್ಲಿ ಅಳವಡಿಸಿಕೊಂಡಿದೆ. ಗರ್ಭಗುಡಿಯ ವಿನ್ಯಾಸ ಅತ್ಯಾಕರ್ಷಕವಾಗಿ ಮೂಡಿಬಂದಿದ್ದು, ಅದರೊಳಗಿನ ಬಾಲಗಣೇಶನ ಮೂರ್ತಿ ಕೂಡಾ ಅಷ್ಟೇ ಸುಂದರವಾಗಿ ತನ್ನತ್ತ ಜನರನ್ನು ಸೆಳೆಯುತ್ತಿದೆ.
ಮಡಿಕೇರಿಯ ಹಿರಿಯ ಕಲಾವಿದ ರವಿ ಎಂಬವರು ಈ ಮೂರ್ತಿಯನ್ನು ಕೆತ್ತಿದ್ದಾರೆ. ಸಮಿತಿಯ 46ನೇ ವರ್ಷದ ಗಣೇಶೋತ್ಸವಕ್ಕೆ ಅಯೋಧ್ಯೆ ಗಣಪ ವಿಶೇಷ ಮೆರುಗು ನೀಡಿದ್ದಾನೆ. ಈ ವಿಶೇಷ ಗಣೇಶನನ್ನು ನೋಡೋದಕ್ಕೆ ಮಡಿಕೇರಿ ಮಾತ್ರವಲ್ಲ ಜಿಲ್ಲೆಯ ಬೇರೆ ಬೇರೆ ಕಡೆಗಳಿಂದ ಜನ ಬರ್ತಿದ್ದಾರೆ. ಸುಂದರ ಗಣಪನನ್ನು ಕಣ್ತುಂಬಿಕೊಂಡು ಖುಷಿ ಪಡ್ತಿದ್ದಾರೆ. ಈ ಗಣೇಶ ಸೆ.21ರವರೆಗೆ ಮಾತ್ರ ಭಕ್ತರಿಗೆ ದರ್ಶನಕ್ಕೆ ಸಿಗಲಿದ್ದಾನೆ..!




