ಮಂಗಳೂರು : ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ಯುನಿಸೆಕ್ಸ್ ಮಸಾಜ್ ಸೆಂಟರ್ ಮೇಲೆ ರಾಮ ಸೇನೆ ದಾಳಿ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಿಜೈ ಕೆಎಸ್ಆರ್‌ಟಿಸಿ ಬಳಿಯ ಮಸಾಜ್ ಸೆಂಟರ್ನಲ್ಲಿ ನಡೆದಿದ್ದು, ಪೀಠೋಪಕರಣ ಧ್ವಂಸ ಮಾಡಲಾಗಿದೆ.
ಸೆಂಟರ್ನ ಗಾಜುಗಳನ್ನು ಪುಡಿಗೈದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದೆಲ್ಲೆಡೆ ಇರುವ ಎಲ್ಲಾ ಮಸಾಜ್ ಸೆಂಟರ್‌ಗಳನ್ನ ಬಂದ್ ಮಾಡುವಂತೆ ಆಗ್ರಹಿಸಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಂಘಟನೆ ಮುಖಂಡ ಪ್ರಸಾದ್ ಅತ್ತಾವರ, ಮಸಾಜ್ ಸೆಂಟರ್ನಲ್ಲಿ ಡ್ರಗ್ಸ್ ನೀಡಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. 16, 17 ವರ್ಷದ ಯುವತಿಯರನ್ನು ಇಲ್ಲಿ ಬಳಸಿಕೊಂಡು ದಂಧೆ ನಡೆಸಲಾಗ್ತಿದೆ. ನಮ್ಮ ಕಾರ್ಯಕರ್ತನ ಸಂಬಂಧಿ ಯುವತಿ ಇದರಲ್ಲಿ ಸಿಲುಕಿದ್ದಾಳೆ. ಹೀಗಾಗಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದೇವೆ ಎಂದರು.

ಈ ನಡುವೆ ಸಂಘಟನೆಯ ಆರೋಪವನ್ನ ಮಸಾಜ್ ಸೆಂಟರ್ ಮಾಲೀಕ ಸುಧೀರ್ ಅಲ್ಲಗಳೆದಿದ್ದಾರೆ. ದಾಳಿ ಮಾಡಿದ್ದವರೇ ಕೆಲವು ವಸ್ತುಗಳನ್ನು ತಂದು ಬಿಸಾಡಿದ್ದಾರೆ. ವಾರಕ್ಕೊಮ್ಮೆ ನಮ್ಮ ಸೆಂಟರ್ ಅಧಿಕಾರಿಗಳಿಂದ ಪರಿಶೀಲನೆಗೊಳಪಡುತ್ತಿದೆ. ಕಾನೂನು ಪ್ರಕಾರ ಅನುಮತಿ ಪಡೆದು ನಾವು ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.
ದಾಳಿ ಬಗ್ಗೆ ಮಾಹಿತಿ ಅರಿತ ಪೊಲೀಸರು ಆಗಮಿಸಿ ಪ್ರಸಾದ್ ಅತ್ತಾವರ ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
