Monday, August 4, 2025
!-- afp header code starts here -->
Homeಕ್ರೈಮ್MUDA ಕೇಸಲ್ಲಿ ED ನೋಟಿಸ್‌ - ಸಿಎಂ ಪತ್ನಿ ಪಾರ್ವತಿ, ಸಚಿವ ಬೈರತಿ ಸುರೇಶ್‌ಗೆ ಹೈಕೋರ್ಟ್‌...

MUDA ಕೇಸಲ್ಲಿ ED ನೋಟಿಸ್‌ – ಸಿಎಂ ಪತ್ನಿ ಪಾರ್ವತಿ, ಸಚಿವ ಬೈರತಿ ಸುರೇಶ್‌ಗೆ ಹೈಕೋರ್ಟ್‌ ಬಿಗ್‌ ರಿಲೀಫ್..!

ಬೆಂಗಳೂರು : ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಬಸವರಾಜ್‌ಗೆ ನೀಡಿದ್ದ ಇಡಿ ಸಮನ್ಸ್​ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಮುಂದಿನ ವಿಚಾರಣೆ ನಡೆಯುವ ಫೆಬ್ರವರಿ 10ರ ವರೆಗೆ ಇಡಿ ಸಮನ್ಸ್​ಗೆ ತಡೆ ನೀಡಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಆದೇಶಿಸಿದೆ.
ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಇಡಿ ನೋಟಿಸ್ ನೀಡಿತ್ತು. ಇದಕ್ಕೆ ತಡೆ ನೀಡುವಂತೆ ಸಿಎಂ ಪತ್ನಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ಇಂದು ಸಂಜೆ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​, ಪಾರ್ವತಿ ಅವರಿಗೆ ತಾತ್ಕಾಲಿಕ ರಿಲೀಫ್ ನೀಡಿದೆ. ಜೊತೆಗೆ ಸಚಿವ ಭೈರತಿ ಸುರೇಶ್​ ಅವರಿಗೂ ನೀಡಲಾಗಿದ್ದ ಇಡಿ ಸಮನ್ಸ್​ಗೂ ಸಹ ಕೋರ್ಟ್​ ತಡೆಯಾಜ್ಞೆ ನೀಡಿದೆ.
ಸಚಿವ ಭೈರತಿ ಸುರೇಶ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದರು. ಭೈರತಿ ಸುರೇಶ್ ಈ ಪ್ರಕರಣದಲ್ಲಿ ಆರೋಪಿಯಲ್ಲ. ಹೀಗಿದ್ದರೂ ಇಡಿಯಿಂದ ಸಮನ್ಸ್ ಜಾರಿಗೊಳಿಸಲಾಗಿದೆ ಎಂದರು.
ಸಿಎಂ ಪತ್ನಿ ಪಾರ್ವತಿ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದರು. 14 ಸೈಟ್ ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪವಿದೆ. ಅಪರಾಧದಿಂದ ಗಳಿಸಿದ ಹಣವಿಲ್ಲದಿದ್ದರೂ ತನಿಖೆ ನಡೆಸುತ್ತಿದೆ. ಹೀಗಾಗಿ ತನಿಖೆಗೆ ತಡೆ ನೀಡುವಂತೆ ಕೋರ್ಟ್​ಗೆ ಮನವಿ ಮಾಡಿದರು.
ಸಿಎಂ ಪ್ರಕರಣದ ವಿಚಾರಣೆ ನಡೆಯುವಾಗ ಇದರಲ್ಲೇಕೆ ಮುಂದುವರಿಯುತ್ತೀರಾ? ಎಂದು ಇಡಿ ಪರ ವಕೀಲರಿಗೆ ನ್ಯಾ.ಎಂ.ನಾಗಪ್ರಸನ್ನ ಪ್ರಶ್ನಿಸಿದರು. ಇಡಿ ಪರ ವಕೀಲ ಎಎಸ್‌ಜಿ ಅರವಿಂದ್ ಕಾಮತ್‌ ಅವರು, ಮುಡಾ ಪ್ರಕರಣದಲ್ಲಿ ಸಿಎಂ ಪತ್ನಿ ಪಾರ್ವತಿ 2ನೇ ಆರೋಪಿ. ಅವರ ಮೇಲೆ ಅಕ್ರಮವಾಗಿ ಸೈಟ್ ಪಡೆದ ಆರೋಪವಿದೆ. ಪಿಎಂಎಲ್ಎ ಕಾಯ್ದೆಯಡಿ ಅನುಸೂಚಿತ ಕೇಸ್ ಇದೆ ಎಂದು ಉತ್ತರಿಸಿದರು.
ನ್ಯಾ.ಎಂ.ನಾಗಪ್ರಸನ್ನ: ಅಪರಾಧದಿಂದ ಗಳಿಸಿದ ಸಂಪತ್ತು ಈಗಿಲ್ಲವಲ್ಲ. ಇಡಿ ತನಿಖೆಯಿಂದ ಹೈಕೋರ್ಟ್ ಕಾಯ್ದಿರಿಸಿರುವ ಕೇಸ್‌ಗೆ ಹಾನಿಯಾಗಬಾರದು. ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಸುವಂತಿಲ್ಲವೆಂದು ಆದೇಶ ನೀಡಿದ್ದೇನೆ. ಈಗ ಇಡಿ ತನಿಖೆಗೆ ಅವಕಾಶ ನೀಡುವುದು ಹೇಗೆ? ಈಗಲೇ ತನಿಖೆ ನಡೆಸಬೇಕಾದ ತುರ್ತು ಅಗತ್ಯವೇನಿದೆ ಎಂದು ಪ್ರಶ್ನಿಸಿದರು.
ಇಡಿ ಪರ ಎಎಸ್‌ಜಿ ಅರವಿಂದ್ ಕಾಮತ್ – ವಿಚಾರಣೆಗೆ ಹಾಜರಾಗಿ ದಾಖಲೆಗಳನ್ನು ಹಾಜರುಪಡಿಸಿ ಎಂದಷ್ಟೇ ಹೇಳಿದ್ದೇವೆ. ಇದರಿಂದ ಹೈಕೋರ್ಟ್ ಮುಂದಿರುವ ಕೇಸ್ ಗೆ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನ್ಯಾ.ಎಂ.ನಾಗಪ್ರಸನ್ನ- ಸಿಬಿಐ ತನಿಖೆಗೆ ಒಪ್ಪಿಸುವ ಬಗ್ಗೆ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ. ಲೋಕಾಯುಕ್ತ ಪೊಲೀಸರ ತನಿಖೆಯ ವರದಿ ಸಲ್ಲಿಕೆ ಮುಂದೂಡಿದ್ದೇವೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಅಂತಿಮ ವರದಿ ಸಲ್ಲಿಕೆ ಮುಂದೂಡಿದ್ದೇವೆ. ಇಡಿ ನಡೆಸುತ್ತಿರುವ ತನಿಖೆ ಲೋಕಾಯುಕ್ತ ಪೊಲೀಸ್ ಎಫ್‌ಐಆರ್ ಆಧರಿಸಿದೆ. ಹೀಗಾಗಿ ಇಡಿ ಸಮನ್ಸ್ ನಿಂದ ಹೈಕೋರ್ಟ್ ಕಾಯ್ದಿರಿಸುವ ಕೇಸ್ ಮೇಲೆ ಪರಿಣಾಮವಾಗಬಹುದು. ಡಾ. ನಟೇಶ್ ಪ್ರಕರಣದಲ್ಲಿ ಹೈಕೋರ್ಟ್ ಇಡಿ ಸಮನ್ಸ್ ರದ್ದುಪಡಿಸಿದೆ. ಇಡಿ ಹೇಳಿಕೆ ದಾಖಲಿಸಿಕೊಳ್ಳುತ್ತಿದೆ ಅಷ್ಟೇ ಎಂದು ಇಡಿ ಪರ ವಕೀಲರು ಹೇಳಿದ್ದಾರೆ. ಆದ್ರೆ, ಇಡಿ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನ್ಯಾ.ಎಂ.ನಾಗಪ್ರಸನ್ನ: ಹಾಜರಾಗದಿದ್ದರೆ ನೀವು ನಾಳೆ ಅವರನ್ನು ಬಂಧಿಸಬಹುದು. ಹೀಗಾಗಿ ಈ ಬಗ್ಗೆ ಸೂಕ್ತ ಆದೇಶ ಹೊರಡಿಸಬೇಕಿದೆ ಎಂದು ಹೇಳಿ ಇಡಿ ಸಮನ್ಸ್​ಗೆ ತಡೆ ನೀಡಿದ್ದಾರೆ.
ಹೀಗೆ ಈ ಪ್ರಕರಣದ ವಾದ ಪ್ರತಿವಾದ ನಡೆಯಿತು. ಫೆ. ೧೦ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಆ ದಿನ ಏನು ನಡೆಯಲಿದೆ? ಅಲ್ಲಿಯವರೆಗೆ ಈ ಪ್ರಕರಣದಲ್ಲಿ ಏನೇನು ಬೆಳವಣಿಗೆ ಆಗಲಿದೆ ಅನ್ನೋದು ಸದ್ಯದ ಕುತೂಹಲ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!