ಬೆಂಗಳೂರು : ರಾಜಧಾನಿಯಲ್ಲಿ ೩೬ ಕೋಟಿ ರೂ. ಮೌಲ್ಯದ ಮದಕ ವಸ್ತುಗಳನ್ನು ನಾಶಪಡಿಸಲಾಗಿದೆ. ಮಾದಕ ದ್ರವ್ಯಗಳ ಕಳ್ಳಸಾಗಣೆ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ಬೆಂಗಳೂರು ನಗರ ಕಸ್ಟಮ್ಸ್ ಕಮಿಷನರೇಟ್ 36 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ನಾಶಪಡಿಸಿದೆ. ಈ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊಕೇನ್ ಮತ್ತು ಗಾಂಜಾ ಸೇರಿದಂತೆ 11.997 ಕಿಲೋದಷ್ಟು ನಿಷೇಧಿತ ಡ್ರಗ್ಸ್ ಅನ್ನು ಜನವರಿ 24 ರಂದು ದಹಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಮಾದಕವಸ್ತು ಕಳ್ಳಸಾಗಣೆ ಮತ್ತು ಅದರ ಅಕ್ರಮ ವಿತರಣೆ ತಡೆಗಟ್ಟುವುದಕ್ಕಾಗಿ ಕೇಂದ್ರ ನೇರ ತೆರಿಗೆಗಳ ಮಂಡಳಿ ಮತ್ತು ಕಸ್ಟಮ್ಸ್ (ಸಿಬಿಐಸಿ) ಆರಂಭಿಸಿದ ಮಾದಕ ದ್ರವ್ಯ ವಿಲೇವಾರಿ ಅಭಿಯಾನದಡಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ಮಾದಕವಸ್ತು ಕಳ್ಳಸಾಗಣೆಯನ್ನು ತಡೆಗಟ್ಟುವಲ್ಲಿ ಮತ್ತು ವ್ಯಾಪಕವಾಗುತ್ತಿರುವ ಮಾದಕ ವ್ಯಸನವನ್ನು ತಡೆಗಟ್ಟುವಲ್ಲಿ ಈ ಕ್ರಮ ಮಹತ್ವದ ಹೆಜ್ಜೆ ಎಂದು ಕಸ್ಟಮ್ಸ್ ಕಮಿಷನರ್ ಹೇಳಿದ್ದಾರೆ. ಅಲ್ಲದೆ, ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲ ಅಧಿಕಾರಿಗಳನ್ನು ಶ್ಲಾಘಿಸಿದ್ದಾರೆ. ಹೆಚ್ಚಿನ ಜಾಗರೂಕತೆಯೊಂದಿಗೆ ಡ್ರಗ್ಸ್ ವಿರುದ್ಧದ ಹೋರಾಟವನ್ನು ಮುಂದುವರೆಸುವುದು ಮುಖ್ಯ ಎಂದು ಅವರು ಹೇಳಿದ್ದಾರೆ.
ನ್ಯಾಯಾಲಯದ ಒಪ್ಪಿಗೆ ಮೇರೆಗೆ ಕೇಂದ್ರ ವ್ಯಾಪ್ತಿಯ ಆರು ವಲಯಗಳು ವಶಪಡಿಸಿಕೊಂಡ 394 ಕಿಲೋ ಗಾಂಜಾವನ್ನು ನಾಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 112.67 ಕಿಲೋ ಗಾಂಜಾ ಮತ್ತು 5 ಲೀಟರ್ ಹಶಿಶ್ ವಶಪಡಿಸಿಕೊಳ್ಳಲಾಗಿತ್ತು. ಕೋಲಾರ ಪೊಲೀಸರು 97.624 ಕಿಲೋದಷ್ಟು ಗಾಂಜಾ ವಶಪಡಿಸಿಕೊಂಡರೆ, ಕೆಜಿಎಫ್ ಪೊಲೀಸರು 83.45 ಕಿಲೋ ಗಾಂಜಾ ವಶಪಡಿಸಿಕೊಂಡಿದ್ದರು. ತುಮಕೂರು ಜಿಲ್ಲಾ ಪೊಲೀಸರು 51.7 ಕಿಲೋ ಗಾಂಜಾ ಮತ್ತು 47 ಗ್ರಾಂ ಎಂಡಿಎಂಎ, ರಾಮನಗರ ಜಿಲ್ಲಾ ಪೊಲೀಸರು 27.8 ಕಿಲೋ, ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು 24.760 ಕಿಲೋ ವಶಪಡಿಸಿಕೊಂಡಿದ್ದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನದ ಚಟಕ್ಕೆ ಬಲಿಯಾಗುತ್ತಿರುವ ಬಗ್ಗೆ ವರದಿಯಾಗುತ್ತಿದ್ದು, ಅವರ ಭವಿಷ್ಯ ಮತ್ತು ಹಿತ ಕಾಪಾಡಲು ಜಾಗೃತಿ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತಿದೆ. ಪೋಷಕರು ಕೂಡ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ಮತ್ತು ಅವರ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು ಎಂದು ಮನವಿ ಮಾಡಿದ್ದಾರೆ.