ಹಾಸನ : ಸಕಲೇಶಪುರ ತಾಲೂಕಿನಲ್ಲಿ ನಿರ್ಮಿಸಲಾಗಿರುವ ಅರ್ಜುನ್ ಆನೆ ಸಮಾಧಿಗೆ ಕನಿಷ್ಠ ಮೂಲಸೌಕರ್ಯ ಕಲ್ಪಿಸದೇ, ಲೋಕಾರ್ಪಣೆ ಮಾಡಿದ್ರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಕ್ಷೇತ್ರ ಶಾಸಕ ಸಿಮೆಂಟ್ ಮಂಜು ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಮೂಲಭೂತ ಸೌಕರ್ಯ ಕಲ್ಪಿಸದೆ ಅರ್ಜುನನ ಸಮಾಧಿ ಉದ್ಘಾಟನೆ ಮಾಡುವುದು ಬೇಡ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಇಂಟರ್ ಲಾಕ್, ಜೊತೆಗೆ ಹೋಗಿ ಬರಲು ಸರಿಯಾದ ರಸ್ತೆ ಇಲ್ಲ. ನಾವು ಅಭಿವೃದ್ಧಿಗೆ ಕೇಳಿದ್ದು ೫ ಕೋಟಿ, ಸರ್ಕಾರ ಕೊಡೋದಾಗಿ ಹೇಳಿದ್ದು ೫೦ ಲಕ್ಷ. ಆದರೆ ಇದುವರೆಗೂ ಕೇವಲ ೧೪ ಲಕ್ಷ ರೂ ಮಾತ್ರ ಬಿಡುಗಡೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರ್ಜುನ ಸ್ಮಾರಕ ಮಾಡಲು ಮೂರರಿಂದ ನಾಲ್ಕು ಲಕ್ಷ ರೂ. ಮಾತ್ರ ವಿನಿಯೋಗಿಸಲಾಗಿದೆ. ಅರ್ಜುನ ಆನೆಗೆ ಕೊಡುವ ಗೌರವ ಇಷ್ಟೇನಾ ಎಂಬುದು ನಮ್ಮ ಪ್ರಶ್ನೆ. ಈ ಬಗ್ಗೆ ಸಚಿವರ ಗಮನಕ್ಕೂ ತರಲಾಗಿದೆ. ಉದ್ಘಾಟನೆ ಮುಂದೂಡುವುದಾಗಿ ಹೇಳಿದ್ದಾರೆ. ಈ ಸ್ಮಾರಕ ಉದ್ಘಾಟನೆ ಮಾಡಿದರೇ ಅದು ಪ್ರವಾಸಿ ಸ್ಥಳ ಮಾಡಲು ಸಾಧ್ಯವಿದೆಯಾ ಎಂದು ಪ್ರಶ್ನಿಸಿದರು. ಇದು ಕುಗ್ರಾಮದ ಕಾಡಿನಲ್ಲಿದೆ. ಹೋಗಿ ಬರುವ ರಸ್ತೆಯೇ ಇಲ್ಲ. ಸಲ್ಪ ದಿನದಲ್ಲಿ ಮಳೆ ಶುರುವಾಗುತ್ತದೆ. ಅಲ್ಲಿಗೆ ಯಾರು ಹೋಗಿ ಬರುತ್ತಾರೆ. ಈ ವೇಳೆ ಆನೆ ದಾಳಿ ಮಾಡಿದದೆ ಸುರಕ್ಷತೆ ಕೊಡುವವರು ಯಾರು?. ಅರ್ಜುನ ಆನೆ ಜೊತೆಗೆ ಕರ್ನಾಟಕ ಜನತೆಗೆ ಭಾವನಾತ್ಮಕ ಸಂಬಂಧವಿದೆ. ೮ ಬಾರಿ ಅಂಬಾರಿ ಹೊತ್ತ ಅರ್ಜುನನಿಗೆ ಕೊಡುವ ಗೌರವ ಇಷ್ಟೇನಾ ಅಂತ ಕೇಳುತ್ತಿದ್ದೇನೆ ಎಂದರು.
ಅರ್ಜುನ ವಯಸ್ಸಾಗಿ ಸತ್ತಿಲ್ಲ. ಕಾಡಾನೆ ಕಾರ್ಯಾಚರಣೆ ಮಾಡುವ ವೇಳೆ ಹೋರಾಟ ಮಾಡಿ ವೀರಮರಣ ಹೊಂದಿದ್ದಾನೆ. ಒಳ್ಳೆಯ ವ್ಯವಸ್ಥೆ ಮಾಡದೆ ತರಾತುರಿಯಲ್ಲಿ ಉದ್ಘಾಟನೆ ಮಾಡುವುದು ಬೇಡ. ಅದನ್ನೂ ಮೀರಿ ಉದ್ಘಾಟನೆ ಮಾಡಿದರೆ ಅರಣ್ಯ ಇಲಾಖೆಯ ಬೇಜವಾಬ್ದಾರಿ ನಡೆ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಮುಖರಾದ ಬಿ.ಹೆಚ್. ನಾರಾಯಣಗೌಡ, ಪ್ರಸನ್ನಕುಮಾರ್ ಇತರರು ಇದ್ದರು.
ಅರ್ಜುನನ ಸಮಾಧಿಗೆ ಮೂಲ ಸೌಕರ್ಯ ಕಲ್ಪಿಸಿ – ಆಮೇಲೆ ಲೋಕಾರ್ಪಣೆಗೊಳಿಸಿ – ತಪ್ಪಿದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಸಿಮೆಂಟ್ ಮಂಜು
RELATED ARTICLES