ಬೆಂಗಳೂರು : ಕ್ರಿಕೆಟ್ ಲೋಕದ ಮಹಾಗೋಡೆ ರಾಹುಲ್ ದ್ರಾವಿಡ್ ಅವರಿಗೆ ಬೆಂಗಳೂರಿನಲ್ಲಿ ಹೊಸ ಅನುಭವವಾಗಿದೆ. ಟ್ರಾಫಿಕ್‌ನಲ್ಲಿ ನಿಂತಿದ್ದ ವೇಳೆ ರಾಹುಲ್ ದ್ರಾವಿಡ್ ಕಾರಿಗೆ ಹಿಂದಿನಿಂದ ಗೂಡ್ಸ್ ಆಟೋ ಡಿಕ್ಕಿಯಾಗಿದೆ. ಇದರ ಪರಿಣಾಮ ಕಾರಿನಿಂದ ಇಳಿದು ಬಂದ ರಾಹುಲ್ ದ್ರಾವಿಡ್ ಆಟೋ ಚಾಲಕನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಗೂಡ್ಸ್ ಆಟೋ ಚಾಲಕ ದ್ರೌವಿಡ್ ಜೊತೆ ವಾಗ್ವಾದಕ್ಕೆ ಇಳಿದ ಘಟನೆ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ನಡೆದಿದೆ.
ಕನ್ನಿಂಗ್‌ಹ್ಯಾಮ್ ರಸ್ತೆ ಮೂಲಕ ದ್ರಾವಿಡ್ ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಟ್ರಾಫಿಕ್ ಸಿಗ್ನಲ್‌ನಲ್ಲಿ ರಾಹುಲ್ ದ್ರಾವಿಡ್ ಕಾರು ನಿಲ್ಲಿಸಿದ್ದರು. ಈ ವೇಳೆ ಗೂಡ್ಸ್ ಆಟೋ ಚಾಲಕ ರಾಹುಲ್ ದ್ರಾವಿಡ್ ಕಾರಿಗೆ ಗುದ್ದಿದ್ದಾನೆ. ಇದರಿಂದ ರಾಹುಲ್ ದ್ರಾವಿಡ್ ಕಾರಿನ ಲೈಟ್ ಪುಡಿಯಾಗಿದೆ. ಹಾಗೂ ಇತರ ಭಾಗಗಳು ಸ್ಕ್ರಾಚ್ ಬಿದ್ದಿದೆ. ಹಿಂದಿನಿಂದ ಗುದ್ದಿದ ವಿಚಾರ ಗೊತ್ತಾಗುತ್ತಿದ್ದಂತೆ ದ್ರಾವಿಡ್ ಕಾರಿನಿಂದ ಕೆಳಗಿಳಿದಿದ್ದಾರೆ.
ಆಟೋ ಚಾಲಕನನ್ನು ದ್ರಾವಿಡ್ ಪ್ರಶ್ನಿಸಲು ಮುಂದಾಗಿದ್ದಾರೆ. ಆದರೆ ಗೂಡ್ಸ್ ಆಟೋ ಚಾಲಕ ದ್ರಾವಿಡ್ ಜೊತೆ ಪ್ರತಿವಾದಕ್ಕೆ ಮುಂದಾಗಿದ್ದಾರೆ. ಈ ವೇಳೆ ಇಬ್ಬರ ನಡುವೆ ಸಣ್ಣ ಪ್ರಮಾಣದ ವಾಗ್ವಾದ ನಡೆದಿದೆ. ಪರಿಸ್ಥಿತಿಯನ್ನು ಅರಿತ ರಾಹುಲ್ ದ್ರಾವಿಡ್, ಗೂಡ್ಸ್ ಆಟೋ ಚಾಲಕನ ಜೊತೆ ಮಾತನಾಡಿ ಪ್ರಯೋಜನವಿಲ್ಲದೆಂದು ಅರಿತು, ಅಲ್ಲಿಂದ ತೆರಳಿದ್ದಾರೆ.
ಘಟನೆ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಆದರೆ ರಾಹುಲ್ ದ್ರಾವಿಡ್ ಜೊತೆ ಆಟೋ ಚಾಲಕ ವಾಗ್ವಾದ ನಡೆಸುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾಂತ ಸ್ವರೂಪಿ ದ್ರಾವಿಡ್ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಈ ರೀತಿಯಾಗಿ ಕಾಣಿಸಿಕೊಂಡಿದ್ದಾರೆ. ಕೆಲವು ವರ್ಷದ ಹಿಂದೆ ಜಾಹೀರಾತೊಂದರಲ್ಲಿ ಇಂದಿರಾ ನಗರದ ಗೂಂಡಾ ಅಂತ ಡೈಲಾಗ್ ಮೂಲಕ ಕಾಣಿಸಿಕೊಂಡಿದ್ದರು. ಇದೀಗ ಈಗ ಆಗಿರುವ ಬೆಳವಣಿಗೆಗೆ ಅದನ್ನು ಹೋಲಿಕೆ ಮಾಡಿಕೊಂಡು ಜನ ಕಾಮೆಂಟ್ ಮಾಡ್ತಿದ್ದಾರೆ.
ಬೆಂಗಳೂರಿನ ನಡು ರಸ್ತೆಯಲ್ಲಿ ರಾಹುಲ್ ದ್ರಾವಿಡ್ ಅಸಮಾಧಾನ ಸ್ಪೋಟ – ಕ್ರಿಕೆಟ್ ದಿಗ್ಗಜನಿಗೆ ಗೂಡ್ಸ್ ಆಟೋ ಚಾಲಕ ಮಾಡಿದ್ದೇನು..?
RELATED ARTICLES