ಬೆಂಗಳೂರು : ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕಳುಹಿಸಿತ್ತು. ಆದರೆ ಕೆಲವು ಅಂಶಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ರಾಜ್ಯಪಾಲರು ಅಂಕಿತ ಹಾಕದೆ ವಾಪಸ್ ಕಳುಹಿಸಿದ್ದರು.
ಇದೀಗ ರಾಜ್ಯಪಾಲರ ಪ್ರಶ್ನೆಗಳಿಗೆ ವಿವರವಾದ ಉತ್ತರದೊಂದಿಗೆ ಪ್ರತಿಯನ್ನು ರಾಜ್ಯ ಸರ್ಕಾರ ರಾಜ್ಯಪಾಲರಿಗೆ ರವಾನಿಸಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಅಧಿಕೃತ ಮಾಹಿತಿ ಲಭ್ಯವಾಗಿದೆ. ರಾಜ್ಯಪಾಲರು ಈ ಕೆಳಕಂಡ ಅಂಶಗಳ ಬಗ್ಗೆ ಸ್ಪಷ್ಟನೆಯನ್ನು ಕೇಳಿದ್ದರು.
ಸಹಜ ನ್ಯಾಯದಡಿಯಲ್ಲಿ ಸಾಲ ಕೊಟ್ಟವರಿಗೆ ರಕ್ಷಣೆ ಕಾಣಿಸುತ್ತಿಲ್ಲ. ಸುದೀರ್ಘ ಅವಧಿಯಲ್ಲಿ ಇದು ಮಾರಕವಾಗಲಿದೆ. ಮೈಕ್ರೋ ಫೈನಾನ್ಸ್ 3 ಲಕ್ಷಕ್ಕಿಂತ ಜಾಸ್ತಿ ಸಾಲ ಕೊಡುವುದಿಲ್ಲ. ನೀವು ಐದು ಲಕ್ಷ ದಂಡ ಹೇಗೆ ಹಾಕುತ್ತೀರಾ..? ಎಂದು ಪ್ರಶ್ನಿಸಿದ್ದರು.
ಸಾಲ ಪಡೆಯುವವನ ಬಳಿ ಏನೂ ದಾಖಲೆ ತೆಗೆದುಕೊಳ್ಳಬಾರದು ಎಂದು ಹೇಳಿದ್ದೀರಾ. ಆದರೆ ಇದು ಸರ್ಕಾರಿ ಸಂಸ್ಥೆಗಳ ಸಾಲದ ವೇಳೆ ಅನುಸರಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಶಿಕ್ಷೆ ಪ್ರಮಾಣ ಹತ್ತು ವರ್ಷ ವಿಧಿಸಲಾಗಿದೆ. ಶಿಕ್ಷೆ ಪ್ರಮಾಣದಲ್ಲಿ ಯಾವುದೇ ಲಾಜಿಕ್ ಇಲ್ಲ. ಪ್ರಾಮಾಣಿಕವಾಗಿ ಸಾಲ ಕೊಟ್ಟವರಿಗೂ ಇದು ಪರಿಣಾಮ ಬೀರಲಿದೆ. ಹೀಗಾಗಿ ಬಜೆಟ್ ಅಧಿವೇಶನದಲ್ಲಿ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಬಗ್ಗೆ ಸಾದಕ-ಬಾಧಕ ಚರ್ಚಿಸಿ. ಈಗ ಇರುವ ಕಾನೂನುಗಳಲ್ಲೇ ಪೊಲೀಸರು ಸರಿಯಾದ ಕ್ರಮಕೈಗೊಳ್ಳುತ್ತಿಲ್ಲ. ಪೊಲೀಸರು ಸರಿಯಾದ ಕ್ರಮಕೈಗೊಳ್ಳದಿರುವುದರಿಂದ ಮತ್ತೊಂದು ಕಾನೂನಿನ ಅಗತ್ಯತೆ ಕಾಣುತ್ತಿಲ್ಲ ಎಂದು ರಾಜ್ಯಪಾಲರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಸುಗ್ರೀವಾಜ್ಞೆ – ಸಮಗ್ರ ವಿವರಣೆಯೊಂದಿಗೆ ರಾಜ್ಯಪಾಲರಿಗೆ ಮರಳಿಸಿದ ಸರ್ಕಾರ..!
RELATED ARTICLES