ದೆಹಲಿ : ಭಾರತೀಯ ಸಂಸ್ಕೃತಿ ಮತ್ತು ಭಕ್ತಿಗೆ ಸಮರ್ಪಣೆ ಮಾಡಿಕೊಂಡಿದ್ದ ರಾಮಮಂದಿರದ ಪ್ರಧಾನ ಅರ್ಚಕರಾದ ಆಚಾರ್ಯ ಸತ್ಯೇಂದ್ರ ದಾಸ್ ಅವರು ಬುಧವಾರ ಲಕ್ನೋದ ಪಿಜಿಐ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 87 ವರ್ಷ ವಯಸ್ಸಿನ ಸತ್ಯೇಂದ್ರ ದಾಸ್ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಮುಂಚೆ 34 ವರ್ಷಗಳ ಕಾಲ ರಾಮಜನ್ಮಭೂಮಿಯಲ್ಲಿ ರಾಮಲಲ್ಲಾಗೆ ಸೇವೆ ಸಲ್ಲಿಸಿದ್ದು. ಅದರಲ್ಲಿ 28 ವರ್ಷಗಳ ಕಾಲ ಟೆಂಟ್‌ನಲ್ಲಿದ್ದ ರಾಮಲಲ್ಲಾಗೆ ಪೂಜೆ ಸಲ್ಲಿಸುತ್ತಿದ್ದರು. ರಾಮಮಂದಿರದ ಪ್ರಾಣಪ್ರತಿಷ್ಠೆ ಆಗುವವರೆಗೂ ಅವರು ತಾತ್ಕಾಲಿಕ ಮಂದಿರದಲ್ಲಿ ರಾಮಲಲ್ಲಾಗೆ ಸೇವೆ ಸಲ್ಲಿಸುತ್ತಿದ್ದರು.
ಸತ್ಯೇಂದ್ರ ದಾಸ್ ಅವರ ಬಗ್ಗೆ ಹೇಳೋದಾದ್ರೆ, 1975 ರಲ್ಲಿ ಅವರು ಸಂಸ್ಕೃತ ವಿದ್ಯಾಲಯದಿಂದ ಪದವಿ ಪಡೆದರು. 1976 ರಲ್ಲಿ ಅಯೋಧ್ಯೆಯ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಸಹಾಯಕ ಶಿಕ್ಷಕರಾಗಿ ಕೆಲಸ ಪ್ರಾರಂಭಿಸಿದರು. ಮಾರ್ಚ್ 1992 ರಲ್ಲಿ ಅವರು ರಾಮಲಲ್ಲಾ ಮಂದಿರದಲ್ಲಿ ಅರ್ಚಕರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. ಅವರಿಗೆ ತಿಂಗಳಿಗೆ ಕೇವಲ 100 ರೂಪಾಯಿ ಸಂಬಳ ಸಿಗುತ್ತಿತ್ತು. ಈ ಮೊತ್ತ ಕಡಿಮೆಯಾಗಿದ್ದರೂ, ಅವರ ಶ್ರದ್ಧೆ ಮತ್ತು ಸಮರ್ಪಣೆಯಲ್ಲಿ ಯಾವುದೇ ಕೊರತೆ ಇರಲಿಲ್ಲ. ಕಾಲಾನಂತರದಲ್ಲಿ ಅವರು ರಾಮಮಂದಿರ ಟ್ರಸ್ಟ್‌ನ ಪ್ರಮುಖ ಸದಸ್ಯರಾದರು.
ಕೆಲವು ವರ್ಷಗಳಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಇತ್ತೀಚೆಗೆ ಬ್ರೈನ್ ಹೆಮರೇಜ್‌ನಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾಗುವ ಮೊದಲು ಅವರಿಗೆ ಅಯೋಧ್ಯೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇಂದು ಅವರು ಕೊನೆಯುಸಿರೆಳೆದಿದ್ದಾರೆ.ಆಚಾರ್ಯ ಸತ್ಯೇಂದ್ರ ದಾಸ್ ಅವರ ಕೊಡುಗೆಯನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ರಾಮಮಂದಿರ ಟ್ರಸ್ಟ್ ಸಂತಾಪ ಸೂಚಿಸಿದೆ.
ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ನಿಧನ – ಟೆಂಟ್‌ನಲ್ಲಿದ್ದ ರಾಮಲಲ್ಲಾನಿಗೆ ನಿತ್ಯ ಪೂಜೆ ನೆರವೇರಿಸಿದ್ದ ಸಂತ..!
RELATED ARTICLES