ವರದಿ: ಶಶಿ ಬೆತ್ತದಕೊಳಲು
ಚಿಕ್ಕಮಗಳೂರು/ಕೊಪ್ಪ: ಚಲಿಸುತ್ತಿದ್ದ ಆಟೋದ ಮೇಲೆ ಬೃಹತ್ ಮರ ಬಿದ್ದು, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಗ್ರೆ ಸಮೀಪದ ಹೊಸ್ತೋಟ ಎಂಬಲ್ಲಿ ನಡೆದಿದೆ. ರತ್ನಾಕರ್ ಶಿಡ್ಲೆಮನೆ(40) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಗ್ರೆ ಭಾಗಕ್ಕೆ ಬಾಡಿಗೆಗೆ ಹೋಗಿ, ವಾಪಸ್ ಬರುವಾಗ ಬಿರುಗಾಳಿ ಮಳೆಗೆ ಬೃಹತ್ ಮರ, ಆಟೋದ ಮೇಲೆ ಬಿದ್ದಿದೆ. ಸೀದಾ ಆಟೋದ ಮೇಲೆ ಮರ ಬಿದ್ದಿದ್ದರಿಂದ, ಆಟೋ ಚಾಲಕ ರತ್ನಾಕರ್‌ಗೆ ಪಾರಾಗಲು ಅವಕಾಶವೇ ಸಿಕ್ಕಿಲ್ಲ. ಮಧ್ಯಾಹ್ನ 1.30ರ ವೇಳೆಗೆ ಅವಘಡ ಸಂಭವಿಸಿದ್ದು, ಸ್ಥಳೀಯರು ಹೋಗಿ ನೋಡುವಾಗ ಪ್ರಾಣಪಕ್ಷಿ ಹಾರಿಹೋಗಿತ್ತು. ಬಳಿಕ ಮೆಸ್ಕಾಂ ಸಿಬ್ಬಂದಿಗಳು, ಸ್ಥಳೀಯರು, ಪೊಲೀಸರು ಸ್ಥಳಕ್ಕೆ ಹೋಗಿ, ಮರ ಕಡಿದು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಮರ ಕಟಾವು ಮಾಡದ್ದೇ ಅವಘಡಕ್ಕೆ ಕಾರಣ
ಇನ್ನೂ ಘಟನೆ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ಜೊತೆ ಮಾತನಾಡಿದ ಸ್ಥಳೀಯರಾದ ಪ್ರವೀಣ್ ಜಾಳ್ಮಾರ, ರಸ್ತೆ ಬದಿಯಿದ್ದ ಮರವನ್ನ ಕಡಿಯದ್ದೇ ಇದ್ದಿದ್ದೇ ಈ ಅವಘಡಕ್ಕೆ ಮುಖ್ಯ ಕಾರಣ ಅಂತಾ ಆರೋಪಿಸಿದ್ರು. ಅರಣ್ಯ ಇಲಾಖೆ ಸಿಬ್ಬಂದಿಗಳು, ಮರ ಕಡಿಯಲು ಬಿಡೋದಿಲ್ಲ. ಇದೀಗ ಜೀವವೇ ಹೋಗಿದೆ, ಹೋಗಿರುವ ಜೀವವನ್ನ ವಾಪಸ್ ತಂದು ಕೊಡಲು ಸಾಧ್ಯವೇ ಅಂತಾ ಪ್ರಶ್ನಿಸಿದ್ರು. ಮೃತ ರತ್ನಾಕರ್‌ಗೆ ಮದುವೆಯಾಗಿರಲಿಲ್ಲ, ಒಬ್ಬರೇ ವಾಸ ಮಾಡ್ತಿದ್ರು ಅಂತಾ ಸ್ಥಳೀಯರು ತಿಳಿಸಿದ್ದಾರೆ.