ದಕ್ಷಿಣ ಕನ್ನಡ/ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಉಳ್ಳಾಲ ತಾಲೂಕಿನ ಉರುಮನೆ ಕೋಡಿ ಎಂಬ ಗ್ರಾಮದಲ್ಲಿ ಮನೆ ಮೇಲೆ ಗುಡ್ಡ ಕುಸಿದು 2 ವರ್ಷದ ಆರುಷ್ ಎಂಬ ಕಂದಮ್ಮ ಪವಾಡ ಸದೃಶ ರೀತಿಯಲ್ಲಿ ಬದುಕಿ ಬಂದಿದ್ದಾನೆ. ಆದ್ರೆ ಆರುಷ್ ಸಹೋದರ 3 ವರ್ಷದ ಆರ್ಯನ್ ಸಾವನ್ನಪ್ಪಿದ್ದಾನೆ. ಅಲ್ಲದೇ ಮಕ್ಕಳ ಅಜ್ಜಿ ಪ್ರೇಮಾ ಕೂಡ ಮೃತರಾಗಿದ್ದಾರೆ. ಸದ್ಯ ಅವಶೇಷಗಳಡಿ ಸಿಲುಕಿರೋ ಮಕ್ಕಳ ತಾಯಿ ಅಶ್ವಿನಿಯನ್ನ ಬದುಕಿಸಲು ರಕ್ಷಣಾ ಪಡೆಗಳು ಹರಸಾಹಸ ಪಡುತ್ತಿರೋ ದೃಶ್ಯ ಕರುಳು ಹಿಂಡುವಂತಿದೆ.

ಆರುಷ್ ಸೇರಿ ಮೂವರ ರಕ್ಷಣೆ
ಧಾರಾಕಾರ ಮಳೆಯಿಂದ ಗುಡ್ಡ ಕುಸಿದ ಪರಿಣಾಮ ಮುಂಜಾನೆಯೇ ಇಬ್ಬರನ್ನ ರಕ್ಷಣೆ ಮಾಡಲಾಗಿದೆ. ಮಗುವಿನ ತಂದೆ ಹಾಗೂ ಅಜ್ಜನನ್ನ ರಕ್ಷಣೆ ಮಾಡಲಾಗಿತ್ತು. ಇದೀಗ ಆರುಷ್ ಕೂಡ ಸತತ 9 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಲಾಗಿದೆ. ಆರುಷ್, ಆರ್ಯನ್‌ನನ್ನ ತಾಯಿ ಅಶ್ವಿನಿ ತಬ್ಬಿಕೊಂಡು ಅವಶೇಷಗಳಡಿ ಬಿದ್ದಿರೋ ದೃಶ್ಯ ಕರುಳು ಹಿಂಡುವಂತಿದೆ. ಸದ್ಯ ಆರ್ಯನ್ ಸಾವನ್ನಪ್ಪಿದ್ರೆ, ಆರುಷ್‌ನನ್ನ ಎನ್ ಡಿ ಆರ್ ಎಫ್ ರಕ್ಷಣಾ ಪಡೆ ಜೀವಂತವಾಗಿ ಮೇಲೆತ್ತಲು ಯಶಸ್ವಿಯಾಗಿದೆ.
ಅಶ್ವಿನಿ ಬದುಕಿಸಲು ಹರಸಾಹಸ
ಸದ್ಯ ಅವಶೇಷಗಳಡಿ ಹೂತಿರೋ ಅಶ್ವಿನಿಯನ್ನ ಬದುಕಿಸಲು ಹೋರಾಟ ಮುಂದುವರಿದಿದೆ. ಸ್ಥಳದಲ್ಲಿ ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ಸಿಬ್ಬಂದಿಗಳು ಸೇರಿದಂತೆ ಅಗ್ನಿಶಾಮಕದಳದ ಸಿಬ್ಬಂದಿ ಸೇರಿದಂತೆ ಸ್ಥಳೀಯರು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ವೈದ್ಯರು ಕೂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಅಗತ್ಯ ಆಮ್ಲಜನಕವನ್ನ ಅಶ್ವಿನಿಗೆ ನೀಡಲಾಗ್ತಿದೆ. ಕೆಲ ಗಂಟೆಗಳ ಹಿಂದೆ ನನ್ನ ಮಕ್ಕಳನ್ನ ಬದುಕಿಸಿ ಅಂತಾ ಮಾತಾನಾಡಿದ ಅಶ್ವಿನಿ, ಸದ್ಯ ಸಂಪೂರ್ಣ ನಿತ್ರಾಣಗೊಂಡಿದ್ದು ಯಾವುದೇ ಚಲನವಲನವನ್ನ ತೋರಿಸುತ್ತಿಲ್ಲ. ಈ ಮಧ್ಯೆ ಹೇಗಾದ್ರೂ ಮಾಡಿ ನಿತ್ರಾಣಗೊಂಡಿರೋ ಅಶ್ವಿನಿಯನ್ನ ಬದುಕಿಸಲು ಹೋರಾಟವನ್ನ ರಕ್ಷಣಾ ಪಡೆಗಳು ಮುಂದುವರಿಸಿವೆ. ಇನ್ನೂ ರಕ್ಷಣಾ ಕಾರ್ಯಾಚರಣೆಗೆ ಸತತ ಮಳೆ ತೊಂದರೆ ಕೊಡುತ್ತಿದ್ದು, ಈ ಮಧ್ಯೆಯೂ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.