ದೆಹಲಿ: ಪ್ರಧಾನಮಂತ್ರಿ ಮೋದಿಯವರು ಜು.2 ರಿಂದ 9ರವರೆಗೆ ವಿದೇಶ ಪ್ರವಾಸಕ್ಕೆ ತೆರಳಲಿದ್ದು, ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾ ದೇಶಗಳಿಗೆ ಭೇಟಿ ನೀಡಲಿದ್ದಾರೆ.
`ಆಪರೇಷನ್ ಸಿಂಧೂರ’ ಮೂಲಕ ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನು ಜಾಗತಿಕವಾಗಿ ಮಂಡಿಸುವುದು ಮತ್ತು ರಾಜತಾಂತ್ರಿಕ ಸಹಕಾರವನ್ನು ಉತ್ತೇಜಿಸುವುದಾಗಿದೆ. ಈ ಭೇಟಿಯು ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುವುದರ ಜೊತೆಗೆ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಗುರಿಯನ್ನು ಹೊಂದಿದೆ.
ನಾಳೆ ವಿದೇಶ ಪ್ರವಾಸ ಕೈಗೊಳ್ಳಲಿರುವ ಮೋದಿ ಮೊದಲು ಘಾನಾ ದೇಶಕ್ಕೆ ಭೇಟಿ ನೀಡಲಿದ್ದಾರೆ. ಕಳೆದ 30 ವರ್ಷಗಳಲ್ಲಿ ಭಾರತದ ಪ್ರಧಾನಮಂತ್ರಿಯ ಮೊದಲ ಭೇಟಿ ಇದಾಗಿದೆ. ಜುಲೈ 2-3ರಂದು ನಡೆಯುವ ಈ ಭೇಟಿಯಲ್ಲಿ ಘಾನಾದ ರಾಷ್ಟ್ರಪತಿ ಜಾನ್ ಡ್ರಮಾನಿ ಮಹಾಮಾರೊಡನೆ ಮಾತುಕತೆ ನಡೆಸಲಿದ್ದಾರೆ. ಹಾಗೆ ಜುಲೈ 3-4ರಂದು ಮೋದಿ ಟ್ರಿನಿಡಾಡ್ ಮತ್ತು ಟೊಬಾಗೊ ದೇಶಕ್ಕೆ ಭೇಟಿ ನೀಡಲಿದ್ದಾರೆ, 1999ರ ನಂತರ ಭಾರತದ ಪ್ರಧಾನಮಂತ್ರಿಯ ಮೊದಲ ಭೇಟಿ ಇದಾಗಿದೆ. ಈ ವರ್ಷ ಭಾರತೀಯ ವಲಸಿಗರು ಈ ದೇಶಕ್ಕೆ ಆಗಮಿಸಿದ 180ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದ್ದು, ಈ ಭೇಟಿಯು ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ಜುಲೈ 4-5ರಂದು, ಮೋದಿಯವರು ಅರ್ಜೆಂಟೀನಾಕ್ಕೆ ಭೇಟಿ ನೀಡಿ ರಾಷ್ಟ್ರಪತಿ ಜೇವಿಯರ್ ಮಿಲೇ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. 57 ವರ್ಷಗಳಲ್ಲಿ ಭಾರತದ ಪ್ರಧಾನ ಮಂತ್ರಿಯ ಮೊದಲ ಭೇಟಿ ಇದಾಗಿದೆ. ರಕ್ಷಣಾ ಸಹಕಾರ, ಕೃಷಿ, ಗಣಿಗಾರಿಕೆ, ಶೆಲ್ ಗ್ಯಾಸ್ ಮತ್ತು ನವೀಕರಣ ಶಕ್ತಿಯ ಕ್ಷೇತ್ರಗಳಲ್ಲಿ ಸಹಕಾರವನ್ನು ವೃದ್ಧಿಗೊಳಿಸುವುದು ಈ ಭೇಟಿಯ ಗುರಿಯಾಗಿದೆ.