ಚಾಮರಾಜನಗರ: ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯಲ್ಲಿ ಹುಲಿಗಳ ಸಾವು ಕಂಡುಬಂದಿದ್ದು ಈ ಘಟನೆ ಮಾಸುವ ಮುನ್ನವೇ ಗಡಿ ಜಿಲ್ಲೆಯಲ್ಲಿ ಮತ್ತೊಂದು ಮನಕಲಕುವ ಘಟನೆ ನಡೆದಿದ್ದು 20 ಕ್ಕೂ ಹೆಚ್ಚು ಕೋತಿಗಳ ಶವಗಳು ಪತ್ತೆಯಾಗಿವೆ.

ಕೋತಿಗಳಿಗೆ ವಿಷಪ್ರಾಶನ ಮಾಡಿರುವ ಶಂಕೆ ಕೂಡ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲು ಕೋತಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕೊಡೊಯ್ದಿದ್ದಾರೆ. ವಿಷ ಹಾಕಿ ಸಾಯಿಸಿರಬಹುದು ಎಂದು ಶಂಕೆ ವ್ಯಕ್ತವಾಗಿರುವ ಹಿನ್ನೆಲೆ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.
ಕಂದೇಗಾಲ-ಕೂಡಸೊಗೆ ರಸ್ತೆಯಲ್ಲಿ ಎರಡು ಚೀಲಗಳಲ್ಲಿ ಮಂಗಗಳ ಕಳೇಬರಗಳು ಪತ್ತೆಯಾಗಿವೆ. ಬೇರೆ ಕಡೆ ವಿಷ ಹಾಕಿ ಸಾಯಿಸಿ ಇಲ್ಲಿ ತಂದು ಬಿಸಾಡಲಾಗಿದೆ ಎಂದು ಶಂಕಿಸಲಾಗಿದೆ. ಚೀಲಗಳಿಂದ ವಾಸನೆ ಬರುತ್ತಿರುವುದನ್ನು ಕಂಡು ಅದನ್ನು ತೆರೆದ ಸಾರ್ವಜನಿಕರು ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹುಲಿಗಳ ಸಾವಿಗೆ ಖಂಡನೆ ವ್ಯಕ್ತವಾಗಿತ್ತು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿತ್ತು. ಪ್ರಕರಣದ ತನಿಖೆ ನಡೆಯುತ್ತಿದೆ