ಚಿಕ್ಕಮಗಳೂರು: ಈ ಊರಿನಲ್ಲಿ ಸೇತುವೆ ಇಲ್ಲದ ಕಾರಣ ಕಳೆದ 50 ವರ್ಷಗಳಿಂದ ತೆಪ್ಪದಲ್ಲೇ ಭದ್ರಾ ನದಿ ದಾಟುತ್ತಿದ್ದಾರೆ ಕಳಸ ತಾಲೂಕಿನ ಬುಡಕಟ್ಟು ಜನಾಂಗದವರಿಗೆ ಸರಿಯಾದ ಮೂಲ ಸೌಕರ್ಯ ಸಿಗದಿದ್ದಕ್ಕೆ ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು …ಇದು ಎಲ್ಲೋ ನಡೆದಿದ್ದಲ್ಲ ಕಳಸ ತಾಲೂಕಿನ ಹೊಳೆಕೂಡಿಗೆ, ಹಾದಿಓಣಿ ಗ್ರಾಮದ ಬುಡಕಟ್ಟು ಜನಾಂಗದವರು ಸೇತುವೆ ಇಲ್ಲದ ಕಾರಣ ಕಳೆದ 50 ವರ್ಷಗಳಿಂದ ತೆಪ್ಪದಲ್ಲೇ ಭದ್ರಾ ನದಿ ದಾಟುತ್ತಿದ್ದಾರೆ. ಮಳೆಗಾಲ ಬಂತೆಂದರೆ ಅವರಿಗೆ ಸಂಕಟ ಶುರುವಾದಂತೆ ಯಾಕಂದರೆ ಹೋಗಲು ದಾರಿ ಇಲ್ಲ ಮಧ್ಯ ಬೇರೆ ಹಳ್ಳ ಅದು ಮಳೆಗಾಲಕ್ಕೆ ತುಂಬಿ ಹರಿದರೆ ದೋಣಿ ಮೂಲಕನೇ ಹಾದು ಹೋಗಬೇಕು
ಹಾಗೆ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಆದರೆ ತೆಪ್ಪದಲ್ಲೇ ಕರೆದುಕೊಂಡು ಹೋಗಬೇಕು. ಯಾರಾದರೂ ಮೃತಪಟ್ಟರೇ ಅವರನ್ನು ತೆಪ್ಪದಲ್ಲೇ ಸಾಗಿಸಬೇಕು. ಹೀಗಾಗಿ ನಮಗೊಂದು ಸೇತುವೆ ಅಥವಾ ತೂಗುಸೇತುವೆ ನಿರ್ಮಿಸಿಕೊಡಿ ಎಂದು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು – ರಾಜಕಾರಣಿಗಳ ಭರವಸೆಯ ಮಾತು ಕೊಟ್ಟರೆ ವಿನಃ ಯಾರೂ ಕೂಡ ಈ ಕಡೆ ಮುಖ ಹಾಕಿಲ್ಲವೆಂದು ಅಲ್ಲಿನ ಸ್ಥಳೀಯರು ತಮ್ಮ ಆಖ್ರೋಶವನ್ನು ಹೊರ ಹಾಕಿದ್ದಾರೆ.
ಮಳೆಗಾಲದಲ್ಲಿ ಭದ್ರಾ ನದಿ ತುಂಬಿ ಉಕ್ಕಿ ಹರಿಯುತ್ತಾಳೆ. ಅಂತಹದಲ್ಲಿ ಅಲ್ಲಿನ ಬುಡಕಟ್ಟು ಜನಾಂಗದವರು ತೆಪ್ಪದಲ್ಲೇ ಜೀವನ ದೂಡುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಗ್ರಾಮದ ವೃದ್ಧೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಗ ತೆಪ್ಪದಲ್ಲೇ ಗ್ರಾಮಕ್ಕೆ ಸಾಗಿಸಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಹಾಗಾಗಿ, ಐದು ದಶಕಗಳಿಂದ ಜನಪ್ರತಿನಿಧಿಗಳು, ಅಧಿಕಾರಿಗಳ ಭರವಸೆಯ ಮಾತು ಕೇಳಿ ಕೇಳಿ ಸಾಕಾಗಿದೆ, ಇನ್ಮುಂದೆ ಯಾರಿಗೂ ಮನವಿ ಕೊಡಲ್ಲ. ರಸ್ತೆ, ಸೇತುವೆ ಕೇಳಲ್ಲ. ನಮಗೆ ದಯಾಮರಣ ಕೊಡಿ ಎಂದು ಸ್ಥಳೀಯರು ಕಣ್ಣೀರಿಟ್ಟಿದ್ದಾರೆ.
ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಸಹ ಈ ರೀತಿ ಬದು ಸಾಗಿಸುತ್ತಾರೆ ಅಂದರೆ ಯಾರೂ ನಂಬಲು ಸಾಧ್ಯವಿಲ್ಲ ಹೀಗಾಗಿ ಇನ್ನಾದರೂ ಸರ್ಕಾರ ಹಾಗೂ ಅಲ್ಲಿನ ಸ್ಥಳೀಯ ಶಾಸಕರು ಇತ್ತ ಗಮನ ಹರಿಸಿ ಇವರಿಗೊಂದು ರಸ್ತೆಯೋ ಅಥವಾ ತೂಗುಸೇತುವೆ ನಿರ್ಮಿಸಿಕೊಡುತ್ತಾ ಎಂದು ಕಾದುನೋಡಬೇಕಿದೆ.