ಚಿಕ್ಕಮಗಳೂರು: ಬಿಜೆಪಿಯವರು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ರಾಜ್ಯ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಮಾಡುತ್ತಿರುವುದು ನಾಚಿಗೇಡಿನ ವಿಚಾರವೆಂದು ಜಿಲ್ಲಾ ಕಾಂಗ್ರೆಸ್ ಕಿಸಾನ್ ಸೆಲ್ ಘಟಕದ ಅಧ್ಯಕ್ಷರಾದ ಭರತೇಶ್ ಹೇಳಿದ್ದಾರೆ

ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿದ ಅವರು, ಬಿಜೆಪಿ ವಿರುದ್ಧ ಕಿಡಿಕಾರಿದ್ದಲ್ಲದೇ ಈ ಪ್ರತಿಭಟನೆ ಮಾಡುವುದನ್ನ ಕಿಸಾನ್ ಕಾಂಗ್ರೆಸ್ ಖಂಡಿಸುತ್ತದೆ. ಕೇಂದ್ರ ಸರ್ಕಾರ ಜಿಎಸ್ಟಿ, ಟೋಲ್, ಬೀಜ ಮತ್ತು ರಸಗೊಬ್ಬರ, ಸಿಮೆಂಟ್ ಕಬ್ಬಿಣ ಇನ್ನಿತರೆ ದಿನನಿತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಗೆ, ರೈತ ಕುಟುಂಬಕ್ಕೆ, ಯುವಕರಿಗೆ ಮಧ್ಯಮ ವರ್ಗದವರಿಗೆ ತುಂಬಾ ಹೊರೆಯನ್ನುಂಟು ಮಾಡಿತ್ತು. ಆದರೆ ನಮ್ಮ ಕರ್ನಾಟಕ ರಾಜ್ಯದಿಂದ 17 ಸಂಸದರಿದ್ದು ಈ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಯಾವುದೇ ರೀತಿಯಲ್ಲೂ ಪ್ರಶ್ನಿಸದೆ ಮೌನವಾಗಿದ್ದು ಈಗ ಪಂಚಾಯಿತಿಗಳ ಮುಂದೆ ಬಿಜೆಪಿ ನಾಯಕರು ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು.
ಹಾಗೆ ಮಾಜಿ ಶಾಸಕರಾದ ಸಿ.ಟಿ. ರವಿ ಅವರು ಇಷ್ಟು ದಿನ ಹೊರ ರಾಜ್ಯಗಳಲ್ಲಿ ರಾಜಕೀಯ ಮಾಡುತ್ತಿದ್ದರು ಈಗ ಏಕಾಏಕಿ ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ಹೋರಾಟಕ್ಕಿಳಿದಿರುವುದು ಅವರ ಕೀಳು ಮಟ್ಟದ ರಾಜಕೀಯವನ್ನು ಬಿಂಬಿಸುತ್ತದೆ ಎಂದು ಮಾಜಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತದಾನಂತರ ಮಾತನಾಡಿ ನಮ್ಮ ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಗ್ಯಾರೆಂಟಿ ಯೋಜನೆಗಳಿಂದ ಇವತ್ತು ಜನಸಾಮಾನ್ಯರು ಸ್ವಲ್ಪಮಟ್ಟಿಗೆ ಜೀವನ ಸುಧಾರಿಸಿಕೊಂಡಿದ್ದಾರೆ. ಹಾಗೆ ಗ್ಯಾರಂಟಿ ಯೋಜನೆಗಳು ಇಲ್ಲದೆ ಹೋಗಿದ್ದಲ್ಲಿ ರೈತ ಕುಟುಂಬದವರು ಆತ್ಮಹತ್ಯೆ ದಾರಿಯನ್ನು ಹಿಡಿಯುವ ಪರಿಸ್ಥಿತಿ ಉಂಟಾಗುತ್ತಿತ್ತು ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರುತ್ತ ತಮ್ಮ ಪಕ್ಷವನ್ನು ಗುಣಗಾನ ಮಾಡಿದರು.