ಚಿಕ್ಕಮಗಳೂರು: ಭೀಮ್ ಬ್ರಿಗೇಡ್ ಮುಖಂಡರುಗಳು ಮಂಗಳವಾರ ಉಪ ವಿಭಾಗಾಧಿಕಾರಿ ಬಿ.ಕೆ.ಸುದರ್ಶನ್ ಅವರನ್ನು ಭೇಟಿ ಮಾಡಿ ನಗರದ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯನ್ನು ಸಂಪೂರ್ಣ ವ್ಯವಸ್ಥೆಯುಳ್ಳ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಮನವಿ ಸಲ್ಲಿಸಿದರು.

ಆ ನಂತರ ಬ್ರಿಗೇಡ್ ಮುಖಂಡ ಹರೀಶ್‌ಮಿತ್ರ ಮಾತನಾಡಿ, ಕಲ್ಯಾಣನಗರದಲ್ಲಿರುವ ಅಂಬೇಡ್ಕರ್ ವಸತಿ ಶಾಲೆಯು ಸಂಪೂರ್ಣ ಅವ್ಯವಸ್ಥೆ ಹಾಗೂ ಮೂಲಸೌಕರ್ಯಗಳಿಂದ ವಂಚಿತವಾಗಿದೆ.ಮಳೆಗಾಲದಲ್ಲಿ ವಸತಿ ಶಾಲೆ ಕೆರೆಗಳಂತಾಗಲಿದೆ. ಅಕ್ಕಿಮೂಟೆ, ಕಂಪ್ಯೂಟರ್, ಶಾಲಾ ಹಾಗೂ ಪ್ರಿನ್ಸಿ ಪಾಲರ ಕೊಠಡಿಗಳು ಸಹ ನೀರಿನಿಂದ ತುಂಬಿರುತ್ತದೆ. ಬೇಸಿಗೆ ಕಾಲ ಬಂತೆಂದರೆ ಪಕ್ಕದಲ್ಲೇ ಸಿಮೆಂಟ್, ಇಟ್ಟಿಗೆಯ ಕಾರ್ಖಾನೆಯಿರುವ ಕಾರಣ ದೂಳುಮಯವಾಗಲಿದ್ದು ಇದರಿಂದ ಮಕ್ಕಳಿಗೆ ಕಾಯಿಲೆಗಳು ಎದುರಾಗಲಿದೆ ಎಂದು ತಿಳಿಸಿದರು.

ಪ್ರಮುಖವಾಗಿ ನೀರಿನ ಅವ್ಯವಸ್ಥೆಯಿಂದ ಕೂಡಿರುವುದರಿಂದ ತಿಂಗಳುಗಟ್ಟಲೇ ವಿದ್ಯಾರ್ಥಿಗಳು ಸ್ನಾನ ಮಾಡುತ್ತಿಲ್ಲ. ಹಾಗೆ ಬಾಡಿಗೆ ವಿಪರೀತವಾದರೂ ಕಟ್ಟಡದ ಮಾಲೀಕರು ಯಾವುದೇ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಇದರಿಂದ ಮಕ್ಕಳ ಪಾಲಕರು ವಸತಿ ಶಾಲೆಯ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದು ಕೂಡಲೇ ಜಿಲ್ಲಾಡಳಿತ ಈ ಸಮಸ್ಯೆಗಳ ಬಗ್ಗೆ ಗಂ ಭೀರವಾಗಿ ಪರಿಗಣಿಸಿ ಗುಣಮಟ್ಟ ವ್ಯವಸ್ಥೆಯಿಂದ ಕೂಡಿರುವ ಕಟ್ಟಡಕ್ಕೆ ಶಾಲೆಯನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ದಸಂಸ ಜಿಲ್ಲಾ ಸಂಚಾಲಕ ಬಾಲಕೃಷ್ಣ ಬಿಳೇಕಲ್ಲು, ಬ್ರಿಗೇಡ್‌ನ ಮುಖಂಡರುಗಳಾದ ಕಬ್ಬಿಕೆರೆ ಮೋಹನ್‌ಕುಮಾರ್, ಸತ್ಯನಾರಾಯಣ್, ಲಕ್ಷ್ಮಣಚಾರ್ ಉಪಸ್ಥಿತರಿದ್ದರು.