ಮೂಡಿಗೆರೆ: ತಾಲೂಕಿನ ಸುತ್ತಾಮುತ್ತ ಗ್ರಾಮಗಳಿಗೆ ಕಾಡಾನೆ ನುಗಿದ್ದು ಜನರು ಭಯಭೀತರಾಗಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಕಾಡಾನೆಗಳು ನುಗ್ಗಿದ್ದು ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ.

ತಾಲೂಕಿನ ಗೋಣಿಬಿಡು ಹೋಬಳಿಯ ಜಿ.ಹೊಸಳ್ಳಿ, ಹೊಸಪುರ, ಕಸ್ಕೇಬೈಲ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಒಂದು ತಿಂಗಳಿನಿಂದ ಭುವನೇಶ್ವರಿ ಗುಂಪಿನ 25, ಬೀಟಮ್ಮ 2 ಗುಂಪಿನ 8 ಕಾಡಾನೆಗಳು ಜಿ. ಹೊಸಳ್ಳಿ, ಟಾಟಾ ಎಸ್ಟೇಟ್, ಸಿಲ್ವರ್ ಕಾನು ಎಸ್ಟೇಟ್, ಪಡಿಯ ಕಾಲೊನಿ, ಹೊಸಪುರ, ಹನುಮನಹಳ್ಳಿ ಗ್ರಾಮಗಳಲ್ಲಿ ನಿರಂತರವಾಗಿ ತಿರುಗಾಡುತ್ತಾ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿವೆ.
ಬೀಟಮ್ಮ ಗುಂಪಿನ 8 ಆನೆಗಳು ಮೂರು ದಿನದಿಂದ ಹೊಸಪುರ ಗ್ರಾಮದಲ್ಲಿ ಬೀಡುಬಿಟ್ಟಿದ್ದು. ಭುವನೇಶ್ವರಿ ಗುಂಪಿನಿಂದ ಬೇರ್ಪಟ್ಟ ಮೂರು ಕಾಡಾನೆಗಳು ಜಿ. ಹೊಸಳ್ಳಿಯಿಂದ ಬುಧವಾರ ರಾತ್ರಿ ಹೊರಟು ಬೆಳಿಗ್ಗೆ 5.45ಕ್ಕೆ ಆನೆದಿಬ್ಬ ಗ್ರಾಮದ ಮೂಲಕ ತುಮಕೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಸ್ಕೇಬೈಲ್ ಗ್ರಾಮದ ಮೂಲಕ ಕಮ್ಮರಗೋಡು ಗ್ರಾಮದತ್ತ ಸಾಗಿವೆ.
ಹಾಗೆ ಜಿ.ಹೊಸಳ್ಳಿ ಗ್ರಾಮದ ದೀಪಕ್, ರಾಜೇಗೌಡ, ಪೂರ್ಣೇಶ್, ವಿನಾಯಕ ಎಸ್ಟೇಟ್, ಶೈಲೇಶ್, ಯೋಗೇಶ್, ಹನುಮನಹಳ್ಳಿ ಗ್ರಾಮದ ಆದರ್ಶ, ಕಮ್ಮರಗೋಡು ಗ್ರಾಮದ ಅರುಣ್ ಸೆರಾವೋ, ಕಣ್ಣಪ್ಪ ಗೌಡ, ಕಸ್ಕೇಬೈಲ್ ಗ್ರಾಮದ ಬಿಳಿಗೌಡ ಸೇರಿದಂತೆ 25ಕ್ಕೂ ಹೆಚ್ಚು ರೈತರ ತೋಟಗಳನ್ನು ನಾಶಪಡಿಸಿವೆ.
ಭುವನೇಶ್ವರಿ ಹಾಗೂ ಬೀಟಮ್ಮ ಎರಡು ಗುಂಪಿನ ಕಾಡಾನೆಗಳು ಜಿ.ಹೊಸಳ್ಳಿ ವ್ಯಾಪ್ತಿಯಲ್ಲಿ ಬೀಡುಬಿಟ್ಟಿವೆ. ಗೋಣಿಬೀಡು ಹೋಬಳಿಯಲ್ಲಿಯೇ 40ಕ್ಕೂ ಅಧಿಕ ಕಾಡಾಣೆಗಳು ತಿರುಗಾಡುತ್ತಿದ್ದು, ರೈತರ ಬೆಳೆಯನ್ನು ದ್ವಂಸಗೊಳಿಸುತ್ತಿವೆ.
ಅರಣ್ಯ ಇಲಾಖೆಯ ಕಾಡಾನೆ ಟಾಸ್ಕ್ ಪೋರ್ಸ್ ಸಿಬ್ಬಂದಿ ಕಾಡಾನೆಯಿರುವ ಪ್ರದೇಶದಲ್ಲಿ ಬೀಡು ಬಿಟ್ಟಿದ್ದಾರೆ. ಟಾಸ್ಕ್ ಪೋರ್ಸ್ ಸಿಬ್ಬಂದಿ ಅರ್ಧ ಗಂಟೆಗೊಮ್ಮೆ ವಾಟ್ಸ್‌ಆ್ಯಪ್ ಗ್ರೂಪ್ ಮೂಲಕ ಕಾಡಾನೆಗಳು ಇರುವ ಗ್ರಾಮಗಳ ಜನರಿಗೆ ಮಾಹಿತಿ ರವಾನಿಸುತ್ತಾ ಪಟಾಕಿ ಸಿಡಿಸಿ ಜನವಸತಿ ಪ್ರದೇಶದತ್ತ ಲಗ್ಗೆ ಇಡದಂತೆ ಎಚ್ಚರ ವಹಿಸಿದ್ದಾರೆ.
ಅಗತ್ಯ ವಸ್ತುಗಳ ಖರೀದಿಗೆ ತೆರಳಲು ಜನ ಭಯಪಡುತ್ತಿದ್ದು ಸಂಜೆ 5 ರ ನಂತರ ಗೋಣಿಬಿಡು ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಜನರು ಮನೆಯಿಂದ ಹೊರಗಡೆ ಬರಲು ಹೆದರುತ್ತಿದ್ದಾರೆ.. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ರೂಪಿಸಬೇಕು ಎಂದು ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಪಟ್ಟು ಹಿಡಿದಿದ್ದಾರೆ.