ಚಿಕ್ಕಮಗಳೂರು: ಕಾಫಿ ಮಂಡಳಿಯು ದೇಶಕ್ಕೆ ಸ್ವಾತಂತ್ರ್ಯ ದೊರೆತು 100 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ `ಏಳು ಬೀಜಗಳಿಂದ ಏಳು ಲಕ್ಷ ಟನ್ಗೆ ಭಾರತದ ಕಾಫಿ ಜಿಗಿತ’ ಎಂಬ ಧ್ಯೇಯವಾಕ್ಯವನ್ನು ಹೊಂದಿದೆ ಎಂದು ಮಂಡಳಿಯ ಅಧ್ಯಕ್ಷ ಎಂ.ಜೆ.ದಿನೇಶ್ ತಿಳಿಸಿದರು.
ನವೆಂಬರ್ನಲ್ಲಿ ಶತಮಾನೋತ್ಸವ ಆಚರಣೆ ಸಂಭ್ರಮದ ಹೊಸ್ತಿಲಲ್ಲಿರುವ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ ಶತಮಾನೋತ್ಸವ ಲಾಂಚನ ಹಾಗೂ ಧ್ಯೇಯವಾಕ್ಯ ಅನಾವರಣ ಹಾಗೂ ಕಾಫಿ ಯಾತ್ರಾ ವಸ್ತು ಪ್ರದರ್ಶನ 2.0 ಉದ್ಘಾಟನಾ ಕಾರ್ಯಕ್ರಮ ನಗರದ ಕಾಫಿ ಮಂಡಳಿ ಉಪ ನಿರ್ದೇಶಕರ ವಿಸ್ತರಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಆಯೋಜನೆಗೊಂಡಿದ್ದ ಸಂದರ್ಭ ಅವರು ಮಾತನಾಡಿದರು.
2027ಕ್ಕೆ ಏಳು ಬೀಜಗಳಿಂದ ಏಳು ಲಕ್ಷ ಟನ್ಗೆ ಜಿಗಿತಕ್ಕೆ ಸಾಧಿಸುವ ಗುರಿಯನ್ನೇ ಮಂಡಳಿ ಮುಖ್ಯ ಧ್ಯೇಯವಾಗಿಸಿಕೊಂಡಿದೆ. ನವೆಂಬರ್ನಲ್ಲಿ ಶತಮಾನೋತ್ಸವ ಆಚರಣೆ ಸಂದರ್ಭವೇ ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ರೋಗ ನಿರೋಧಕ ಹೊಸ ಕಾಫಿ ತಳಿಯನ್ನು ಬಿಡುಗಡೆ ಮಾಡಲಿದೆ. ಇದರ ಜೊತೆಗೆ ಈ ಸಂಸ್ಥೆ ವೈಜ್ಞಾನಿಕ ಸಂಶೋಧನೆ, ಬೆಳೆಗಾರರ ಪಾಲ್ಗೊಳ್ಳುವಿಕೆ, ಮಾರುಕಟ್ಟೆ ವಿಸ್ತರಣೆ ಈ ಮೂರು ಆಶಯಗಳನ್ನು ಹೊಂದಿದೆ. ಬೆಳೆಗಾರರು ಈ ಯೋಜನೆಯಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು ಎಂದು ಹೇಳಿದರು.
ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸರ್ಫೈಸಿ ಕಾಯ್ದೆಯಿಂದ ಕಾಫಿ ಬೆಳೆಯನ್ನು ಹೊರಗಿಡಬೇಕೆಂದು ಸಂಸತ್ತಿನಲ್ಲಿ ಚರ್ಚಿಸಿ ವಾಣಿಜ್ಯ ಸಚಿವರಾದ ಪಿಯೂಷ್ ಗೋಯೆಲ್ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಇದೊಂದು ಜಟಿಲ ಸಮಸ್ಯೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಅವರು ಒಂದು ತಾತ್ಕಾಲಿಕ ಸೂತ್ರವನ್ನು ರೂಪಿಸಿ ಬ್ಯಾಂಕ್ಗಳಿಗೆ ನಿರ್ದೇಶನ ನೀಡಿ, ಬಲವಂತದ ಸಾಲ ವಸೂಲಾತಿಯನ್ನು ಸ್ಥಗಿತಗೊಳಿಸಿ, ಆರು ತಿಂಗಳ ಕಾಲಕ್ಕೆ ವಿಸ್ತರಿಸಿ ಏಕಕಾಲಕ್ಕೆ ಸಾಲ ತೀರುವಳಿಗೆ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.
ಏರ್ಡೆಕ್ಕನ್ನ ಸಂಸ್ಥಾಪಕ ಹಾಗೂ ಪ್ರಗತಿಪರ ಕಾಫಿ ಬೆಳೆಗಾರ ಕ್ಯಾ.ಜಿ.ಆರ್.ಗೋಪಿನಾಥ್, ಕೊಡಗು ಬೆಳೆಗಾರರ ಸಂಘದ ಅಧ್ಯಕ್ಷ ಎ.ನಂದಾ ಬೆಳ್ಯಪ್ಪ, ಅಖಿಲ ಭಾರತ ಕಾಫಿ ಕ್ಯೂರರ್ಸ್ ಸಂಘದ ಅಧ್ಯಕ್ಷ ಎ.ಎನ್.ದೇವರಾಜ್, ಒರಿಸ್ಸಾ ಕಾಫಿ ಬೆಳೆಗಾರರ ಸಂಘದ ಪ್ರದೀಪ್ಕುಮಾರ್ ಮೊಹಂತಿ, ಭಾರತೀಯ ಕಾಫಿ ಮಾರುಕಟ್ಟೆ ಸಹಕಾರ ಸಂಸ್ಥೆಯ ಅಧ್ಯಕ್ಷ ಎ.ಎ.ಶಿವ, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹೆಚ್.ಬಿ.ಶಿವಣ್ಣ, ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಎ.ಎಸ್.ಪರಮೇಶ್, ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಎ.ಅರವಿಂದರಾವ್, ಕಾಫಿ ರೋಸ್ಟರ್ಸ್ ಸಂಘದ ಪಿ.ಜೆ.ಸುರೇಶ್ ಬಾಬು, ಭಾರತೀಯ ಸ್ಪಷಾಲಿಟಿ ಕಾಫಿ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ.ಪೂರ್ಣೇಶ್, ಪ್ರಗತಿಪರ ಆದಿವಾಸಿ ಕಾಫಿ ಬೆಳೆಗಾರರು ಹಾಗೂ ಎಫ್ಪಿಒ ಉತ್ತೇಜಕರಾದ ವನತಲ ಸಂಧ್ಯಾ ಮತ್ತು ಕೊರ್ರ ಸಾವಿತ್ರಿ, ಇನ್ಸ್ಟಾಂಟ್ ಕಾಫಿ ಉತ್ಪಾದಕರು ಮತ್ತು ರಫ್ತುದಾರರ ಸಂಘದ ಅಧ್ಯಕ್ಷ ಕೆ.ವಿ.ಕೆ.ರಾಜು, ಮತ್ತು ಕಾಫಿ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.