ಮಂಗಳೂರು: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ ಬಗ್ಗೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದ್ದು, ಇಂದು ಎಸ್‌ಐಟಿ ತಂಡ ತನಿಖೆ ಆರಂಭಿಸಲಿದೆ.
ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದ ವಿಶೇಷ ತನಿಖಾ ತಂಡ ಇಂದು ಧರ್ಮಸ್ಥಳಕ್ಕೆ ಆಗಮಿಸಲಿದ್ದು. ಈ ವೇಳೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅನಾಮಿಕ ವ್ಯಕ್ತಿ ನೀಡಿದ ದೂರಿನ ತನಿಖೆ ನಡೆಸಲಿದೆ. ಮೊದಲಿಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಮಿಸಲಿರೋ ಎಸ್‌ಐಟಿ ಅಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ, ಧರ್ಮಸ್ಥಳ ಪೊಲೀಸ್ ಇನ್ಸ್‌ಪೆಕ್ಟರ್ ಜೊತೆ ಪ್ರಕರಣದ ಮಾಹಿತಿ ಪಡೆಯಲಿದ್ದಾರೆ.
ಮೊದಲು ಎಫ್‌ಐಆರ್ ಮತ್ತು 164 ಅಡಿ ಹೇಳಿಕೆ ಪ್ರತಿ ಅತ್ಯಗತ್ಯ. ಬಳಿಕ ಜಡ್ಜ್ ಮುಂದೆ ಕೊಟ್ಟ ಹೇಳಿಕೆ ಮಾಹಿತಿ ಪಡೆಯಲಿದೆ ಎಸ್‌ಐಟಿ. ನಂತ್ರ ಹೇಳಿಕೆ ನೀಡಿದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಸದ್ಯ ಸಿಕ್ಕಿರೋ ಅಸ್ಥಿಪಂಜರದ ಡಿಎನ್‌ಎ ಮ್ಯಾಚಿಂಗ್ ಪ್ರಕ್ರಿಯೆ ನಡೆಯಲಿದೆ. ಇದಾದಮೇಲೆ ಬಾಕಿ ಉಳಿದಿರೋ ಅಸ್ಥಿಪಂಜರ ಹುಡುಕಾಟಕ್ಕೆ ಎಸ್‌ಐಟಿ ಮುಂದಾಗಲಿದೆ. ತನಿಖೆ ಬಳಿಕ ಕೋರ್ಟ್ಗೆ ದೋಷಾರೋಪಪಟ್ಟಿ ಸಲ್ಲಿಕೆ ಮಾಡಲಿದೆ.
ದೂರುದಾರನ ಹೇಳಿಕೆಯಲ್ಲೇನಿದೆ?
1995ರಿಂದ 2014ರವರೆಗೆ ಧರ್ಮಸ್ಥಳದ ನೌಕರನಾಗಿದ್ದೆ. ನಾನು ಹಲವು ಶವಗಳನ್ನು ವಿಲೇವಾರಿ ಮಾಡಿದ್ದೇನೆ. ಹೂತಿಟ್ಟ ಶವಗಳಲ್ಲಿ ಮಹಿಳೆಯರದ್ದೇ ಹೆಚ್ಚು. ಇವೆಲ್ಲ ಅನಾಥ ಶವಗಳು ಅಂತ ನಾನು ಭಾವಿಸಿದ್ದೆ. ಆನಂತರ ನನಗೆ ಅನುಮಾನ ಬರಲು ಶುರುವಾಯ್ತು. ಕೆಲ ಮಹಿಳೆಯರ ಶವಗಳು ನಗ್ನ ಸ್ಥಿತಿಯಲ್ಲಿದ್ದವು. ಲೈಂಗಿಕ ಆಕ್ರಮಣ, ಹಿಂಸೆಯ ಕುರುಹುಗಳಿದ್ದವು.
ನಾನು ಪೊಲೀಸರಿಗೆ ಹೇಳಲು ಮುಂದಾದಾಗ ನನ್ನ ಮೇಲೆ ಹಲ್ಲೆ ಮಾಡಿದರು. ಶವ ಹೂತಿಟ್ಟ ವಿಚಾರ ಬಯಲು ಮಾಡದಂತೆ ಬೆದರಿಸಿದರು. ನಿನ್ನನ್ನೂ ಹೂತು ಹಾಕುತ್ತೇನೆ ಅಂತ ಬೆದರಿಕೆ ಹಾಕಿದರು. ನಾನು ಜೀವ ಭಯದಿಂದ 11 ವರ್ಷಗಳ ಹಿಂದೆ ಧರ್ಮಸ್ಥಳ ತೊರೆದೆ. ಈಗ ನನಗೆ ಪಾಪಪ್ರಜ್ಞೆ ಕಾಡುತ್ತಿದೆ. ಕೊಲೆಪಾತಕರು, ಅತ್ಯಾಚಾರಿಗಳು ಯಾರೆಂದು ಗೊತ್ತಾಗಬೇಕು.
ಹೂತು ಹಾಕಿರುವ ಸ್ಥಳವನ್ನು ತೋರಿಸಲು ನಾನು ಸಿದ್ಧ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿ ಎಂದು ದೂರುದಾರ ಒತ್ತಾಯಿಸಿದ್ದಾರೆ