ಕೊಪ್ಪ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿದ್ದ ವಿದ್ಯಾರ್ಥಿನಿ ಶಮಿತಾ ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕಾರ್ಡ್ ಅಭಿಯಾನ ನಡೆಸುತ್ತಿದ್ದ ಇಬ್ಬರಿಗೆ ಪೊಲೀಸ್ ಇಲಾಖೆ ಇದೀಗ ನೊಟೀಸ್ ನೀಡಿದೆ.
ಶಮಿತಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಹಾಗೂ ವಾಟ್ಸಾಪ್ ಸ್ಟೇಟಸ್ ಹಾಕುತ್ತಿರುವುದು ಕಂಡುಬಂದಿದ್ದು, ಈ ಅನುಮಾನಾಸ್ಪದ ಸಾವಿಗೆ ಸಂಬಂಧಪಟ್ಟಂತೆ ತಮ್ಮ ಬಳಿ ಯಾವುದಾದರೂ ಸಾಕ್ಷ್ಯಾಧಾರಗಳು, ದಾಖಲೆಗಳು ಇದ್ದಲ್ಲಿ ಖುದ್ದು ಹಾಜರಾಗಿ ನೀಡುವಂತೆ ಅನಿಲ್ ಹಾಗೂ ವಿನಯ್ ಶಿವಪುರ ಅವರಿಗೆ ಕೊಪ್ಪ ಠಾಣೆ ಸಬ್ ಇನ್ಸ್ಪೆಕ್ಟರ್ ನೊಟೀಸ್ ನೀಡಿದ್ದಾರೆ
ಏನಿದು ಪ್ರಕರಣ
ಕೊಪ್ಪ ತಾಲೂಕಿನ ಬೊಮ್ಲಾಪುರ ಸಮೀಪದ ಹೊಕ್ಕಳಿಕೆ ಗ್ರಾಮದ ಶಮಿತಾ ಎಂಬ ವಿದ್ಯಾರ್ಥಿನಿ, ಮೊರಾರ್ಜಿ ವಸತಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದರು. 2025ರ ಜೂನ್ 29ರಂದು ಶಾಲೆಯ ಶೌಚಾಲಯದಲ್ಲಿ ನೇಣು ಬಿಗಿದುಕೊಂಡ ಸ್ಥತಿಯಲ್ಲಿ ಪತ್ತೆಯಾಗಿದ್ದಳು. ರಾತ್ರಿಯವರೆಗೂ ಸ್ನೇಹಿತರೊಂದಿಗೆ ಸಂತೋಷವಾಗಿ ಮಾತನಾಡಿದ್ದ ಶಮಿತಾ, ಬೆಳಗಿನ ಜಾವ ಆತ್ಮಹತ್ಯೆಗೆ ಶರಣಾಗಿದ್ದರು.
ಇದೇ ರೀತಿಯ ಘಟನೆ 2023ರ ಜುಲೈ 27ರಂದು ಸಂಭವಿಸಿತ್ತು. ಆಗ ವಿದ್ಯಾರ್ಥಿನಿ ಅಮೂಲ್ಯ ಶಾಲೆಯ ಇದೇ ಬಾತ್‌ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಎರಡೂ ಘಟನೆಗಳು ಒಂದೇ ಸ್ಥಳದಲ್ಲಿ, ಒಂದೇ ಶೈಲಿಯಲ್ಲಿ, ಕಬ್ಬಿಣದ ರಾಡ್‌ಗೆ ನೇಣುಬಿಗಿದುಕೊಂಡಿರುವುದು ಸಾರ್ವಜನಿಕರಲ್ಲಿ ಮತ್ತು ಪೋಷಕರಲ್ಲಿ ಅನುಮಾನಕ್ಕೆ ಕಾರಣವಾಗಿತ್ತು.
ಇದಾದ ಬಳಿಕ ಕೊಪ್ಪದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆಗಳು ನಡೆದಿದ್ದವು. ಈ ಬಳಿಕ ಶಾಲೆಯ ಪ್ರಾಂಶುಪಾಲೆ ರಜಿನಿ ಹಾಗೂ ವಾರ್ಡನ್ ಓರ್ವರನ್ನು ಸಸ್ಪೆಂಡ್ ಮಾಡಲಾಗಿತ್ತು.