ಮೂಡಿಗೆರೆ: ಕಾರ್ಗಿಲ್ ವಿಜಯ್ ದಿವಸದ ಅಂಗವಾಗಿ ಪಟ್ಟಣದ ಅಮರ್ ಜವಾನ್ ವೃತ್ತದಲ್ಲಿ ವಿವಿಧ ಸಂಘ ಸಂಸ್ಥೆ, ರಾಜಕೀಯ ಪಕ್ಷಗಳು ಸೇರಿ ಕಾರ್ಗಿಲ್ ವಿಜಯ್ ದಿನವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಮೂಡಿಗೆರೆ ಮಾಜಿ ಯೋಧರ ಸಂಘಟನೆ ತಾಲೂಕು ಅಧ್ಯಕ್ಷ ಚಂದ್ರೇಶ್ ಮಗ್ಗಲಮಕ್ಕಿ ಮಾತನಾಡಿ, ರಾಜತಾಂತ್ರಿಕ ನೀತಿ. ನಿಯಮಗಳು ಅನ್ವಯ ಸರ್ಕಾರದ ಕೆಲ ನಿಯಮಗಳ ಅನ್ವಯದಂತೆ ಯೋಧರು ಕಾರ್ಯ ನಿರ್ವಹಿಸುತ್ತಾರೆ. ಹುತಾತ್ಮರನ್ನು ನಾವುಗಳು ಸ್ಮರಿಸಬೇಕು ಹಾಗೆ 1999 ರ ಈ ದಿನದಂದು ಕಾರ್ಗಿಲ್‌ನಲ್ಲಿ ಪಾಕಿಸ್ತಾನಿ ಭಯೋತ್ಪಾದಕರೊಂದಿಗೆ ಹೋರಾಡಿ ಭಾರತವು ಆಪರೇಷನ್ ವಿಜಯ್‌ನ ಮೂಲಕ ಯಶಸ್ಸನ್ನು ಪಡೆದಿದೆ.

ಕಾರ್ಗಿಲ್ ಯುದ್ಧವು ಭಾರತೀಯ ಸೇನೆಯ ಧೈರ್ಯ, ತ್ಯಾಗ, ಮತ್ತು ದೇಶಭಕ್ತಿಯ ಅಮರ ಕಥೆಯಾಗಿದೆ. ಈ ಯುದ್ಧವು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಎತ್ತರದ ಶಿಖರಗಳಲ್ಲಿ, ಪಾಕಿಸ್ತಾನದ ಒಳನುಗ್ಗುವಿಕೆಯ ವಿರುದ್ಧ ಭಾರತೀಯ ಸೈನಿಕರ ಹೋರಾಟವನ್ನು ಶ್ಲಾಘಿಸಿದರು.
ಈ ಘಟನೆಯು ಭಾರತದ ರಕ್ಷಣಾ ಸಾಮರ್ಥ್ಯ ಮತ್ತು ರಾಷ್ಟ್ರೀಯ ಏಕತೆಯನ್ನು ವಿಶ್ವಕ್ಕೆ ತೋರಿಸಿದ್ದು ಈ ದಿನದಂದು ಭಾರತೀಯ ಸೇನೆಯು ಆಪರೇಷನ್ ವಿಜಯ್‌ನ ಯಶಸ್ಸನ್ನು ದಕ್ಕಿಸಿಕೊಂಡಿದ್ದಾಗಿ ತಿಳಿಸಿದರು.ಕಾರ್ಗಿಲ್‌ನಲ್ಲಿ ಪಾಕಿಸ್ತಾನಿ ಒಳನುಗ್ಗುವವರೊಂದಿಗೆ ಮೂರು ತಿಂಗಳ ಕಾಲ ನಡೆದ ಹೋರಾಟದ ನಂತರ ಭಾರತ ಗೆದ್ದಿತು. ಈ ದಿನದ ಸ್ಮರಣೆಗೆ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತದೆ ಎಂದರು.
ಉಪ ಸಭಾಪತಿ ಪ್ರಾಣೇಶ್ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರು ಎಲ್ಲರ ವಿಶ್ವಾಸ ಪಡೆದು ದೇಶ ಮೊದಲು ಎಂಬುದನ್ನು ಎತ್ತಿ ಹಿಡಿದರು. ಸೈನಿಕರು ಎಲ್ಲಾ ತ್ಯಾಗ ಮಾಡಿ ಕಾರ್ಗಿಲ್ ನಮ್ಮದಾಗಿಸಿದ್ದಾರೆ. ದೇಶದ ವಿಚಾರದಲ್ಲಿ ಸುಖಾ ಸುಮ್ಮನೆ ಸೈನಿಕರನ್ನು ದೂಷಿಸುವುದು ಸರಿಯಲ್ಲ. ದೇಶ ಕಟ್ಟುವ ಬಗ್ಗೆ ಯೋಚನೆ ಮಾಡುವುವರೊಂದಿಗೆ ನಾವೆಲ್ಲರೂ ಸಹಕಾರ ನೀಡಬೇಕು. ಪ್ರಾಣ ತ್ಯಾಗ ಮಾಡಿದ ಸೈನಿಕರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಈ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಮೌನಚಾರಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಇದೆ ವೇಳೆ ಮೂಡಿಗೆರೆ ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯಕರ್ತರು ಸಹ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಪಟ್ಟಣದ ರಾಜಬೀದಿಗಳಲ್ಲಿ 200 ಅಡಿ ಉದ್ದದ ಭಾರತದ ಬಾವುಟ ಹಿಡಿದು ಭಾರತ ಮಾತೆಗೆ ಜೈ ಘೋಷಣೆ ಕೂಗಿ ಭವ್ಯ ಮೆರವಣಿಗೆ ಮಾಡಿ ಪುಷ್ಪಾರ್ಚನೆ ಮುಖೇನ ಗೌರವ ಸೂಚಿಸಿದರು.
ಈ ಸಂದರ್ಭದಲ್ಲಿ ಮಾಜಿ ಯೋಧರಾದ ಪೂರ್ಣೇಶ್ ದಾರದಹಳ್ಳಿ, ದಿನೇಶ್ ಬಣಕಲ್, ಜಗನಾಥ್ ಸತ್ತಿಗನಹಳ್ಳಿ, ರವಿ ಗೌಡಹಳ್ಳಿ, ರತೀಶ್ ಪಟ್ಟದ್ದೂರು, ಬ್ಲಾಕ್ ಯೂತ್ ಕಾಂಗ್ರೆಸ್ ಪದಾಧಿಕಾರಗಳು, ಕರವೇ ಕಾರ್ಯಕರ್ತರು, ಭಾರತೀಯ ಜನತ ಪಕ್ಷದ ಕಾರ್ಯಕರ್ತರು, ಲಯನ್ಸ್ ಸಂಸ್ಥೆ ಕಾರ್ಯಕರ್ತರು, ಮಹಿಳಾ ಘಟಕದ ಸದಸ್ಯರು, ಬಜರಂಗದಳ ಕಾರ್ಯಕರ್ತರು, ವಿವಿಧ ಪಕ್ಷದ ಮುಖಂಡರು ಸೇರಿದಂತೆ ರಾಷ್ಟ ಭಕ್ತರು ಇದ್ದರು.