ಚಿಕ್ಕಮಗಳೂರು: ಭದ್ರಾ ನದಿಗೆ ಹಾರಿ ಆತ್ಮಹತ್ಯೆ ಯತ್ನಿಸಿದ್ದ ಯುವಕನನ್ನು ಸ್ಥಳೀಯರ ಸಹಕಾರದಿಂದ ಪೊಲೀಸರು ರಕ್ಷಣೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್. ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ
ಅನಿಕೇತ್ ಎಂಬ ಯುವಕ ಕಳೆದ ರಾತ್ರಿ ಭದ್ರಾ ಸೇತುವೆ ಬಳಿಯ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಮರವೊಂದಕ್ಕೆ ಸಿಲುಕಿ ಕಾಪಾಡಿ ಕಾಪಾಡಿ ಎಂದು ಕೂಗಿ ಕೊಳ್ಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಬಾಳೆಹೊನ್ನೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ನೆರವಿನಿಂದ ಯುವಕನನ್ನು ರಕ್ಷಿಸಿದ್ದಾರೆ.
ಶುಕ್ರವಾರ ಸಂಜೆಯಿಂದಲೇ ಯುವಕ ಸೇತುವೆ ಬಳಿ ಓಡಾಡುತ್ತಿರುವುದನ್ನು ಗಮನಿಸಿದ ಪೊಲೀಸರು ಸೇತುವೆ ಮೇಲೆ ಓಡಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದರು. ಆದರೆ ರಾತ್ರಿ ವೇಳೆ ಅನಿಕೇತ್ ಭದ್ರಾ ನದಿಗೆ ಹಾರಿದ್ದಾನೆ. ಹರಿಯುತ್ತಿದ್ದ ಭದ್ರಾ ನದಿಯಲ್ಲಿ ನದಿ ಮಧ್ಯ ಮರ ಒಂದು ಹಿಡಿದು ತನ್ನ ಜೀವವನ್ನು ಉಳಿಸಿಕೊಂಡ ಯುವಕನನ್ನು ಸ್ಥಳೀಯರು ತಮ್ಮ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ನದಿಗೆ ಇಳಿದು ಆತನನ್ನು ಸುರಕ್ಷಿತವಾಗಿ ನದಿಯಿಂದ ಹೊರ ತೆಗೆದಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಬಾಳೆಹೊನ್ನೂರು ಠಾಣೆಯ ಪೊಲೀಸರ ಕಾರ್ಯದಕ್ಷತೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ