ಚಿಕ್ಕಮಗಳೂರು: ಗಿರಿ ಭಾಗದ ತಾಣಗಳಿಗೆ ಭೇಟಿನೀಡುವ ಪ್ರವಾಸಿಗರಿಗೆ ಆನ್‌ಲೈನ್ ನೊಂದಣಿ ಕಡ್ಡಾಯಗೊಳಿಸಿರುವ ಜಿಲ್ಲಾಡಳಿತದ ಕ್ರಮ ಅವೈಜ್ಞಾನಿಕವಾಗಿದ್ದು, ಅದನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ರೆಸಾರ್ಟ್, ಹೋಂಸ್ಟೇ, ಲಾಡ್ಜ್, ಹೋಟೇಲ್ ಮಾಲೀಕರು ಹಾಗೂ ಟ್ಯಾಕ್ಸಿ, ಜೀಪ್ ಚಾಲಕರು ಮತ್ತು ಮಾಲೀಕರ ಸಂಘ ಮತ್ತು ಟೂರ್‍ಸ್ ಅಂಡ್ ಟ್ರಾವೇಲ್ಸ್ ಮಾಲೀಕರು ಗಿರಿಶ್ರೇಣಿಯ ನಾಗರೀಕರು ಒತ್ತಾಯಿಸಿದ್ದಾರೆ.

ಸಂಘಟನೆಗಳ ಪ್ರತಿನಿಧಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೈಸರ್ಗಿಕ ಸೌಂದರ್ಯ ಸವಿಯಲು ಚಿಕ್ಕಮಗಳೂರಿಗೆ ನಾನಾ ಭಾಗಗಳಿಂದ ಪ್ರವಾಸಿಗರು ಬರುತ್ತಿದ್ದು, ಎಲ್ಲಾ ರೀತಿಯ ಜನರು ಇದನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಗಿರಿ ಪ್ರದೇಶಕ್ಕೆ ಆಗಮಿಸುವ ಪ್ರವಾಸಿಗರ ವಾಹನಗಳಿಗೆ ನಿಯಂತ್ರಣಗೊಳಿಸುವುದರಿಂದ ಎಲ್ಲರಿಗೂ ಅನಾನುಕೂಲವಾಗಿದೆ ಎಂದು ತಿಳಿಸಿದರು.
ಪ್ರತಿ ದಿನ ೬೦೦ ವಾಹನಗಳಂತೆ ಎರಡು ಪಾಳಿಯಲ್ಲಿ ೧೨೦೦ ವಾಹನಗಳಿಗೆ ಮಾತ್ರ ಗಿರಿ ಭಾಗಕ್ಕೆ ಪ್ರವೇಶ ಎಂದು ಜಿಲ್ಲಾಡಳಿತ ತಿಳಿಸಿದೆ. ಅದೂ ಸಹ ಯಾವ ರೀತಿಯ ವಾಹನಕ್ಕೆ ಎಷ್ಟು ಅವಕಾಶ ಎನ್ನುವುದನ್ನು ತಿಳಿಸಿಲ್ಲ. ಈ ವಾಹನಗಳನ್ನೇ ನಂಬಿಕೊಂಡಿರುವುದರಿಂದ ಕುಟುಂಬಗಳು ಆತಂಕಕ್ಕೀಡಾಗಿವೆ ಎಂದು ಹೇಳಿದರು.
ಅನೇಕ ಕಾಫಿ ತೋಟಗಳು ಈ ಭಾಗದಲ್ಲಿವೆ, ಸಾವಿರಾರು ಮನೆಗಳಿಗೆ ಈ ನಡುವೆ ಆನ್‌ಲೈನ್ ಅನುಮತಿ ಎಂದರೆ ನೆಂಟರು, ಬಂಧುಗಳು ಬಂದಾಗ, ಅನಾರೋಗ್ಯದಂತಹ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕೆಂದರೆ ತಕ್ಷಣಕ್ಕೆ ಆನ್‌ಲೈನ್ ಬುಕ್ಕಿಂಗ್ ಮಾಡಿಕೊಂಡು ಓಡಾಡಲು ಆಗುವುದಿಲ್ಲ. ಒಂದು ಬಾರಿ ಆನ್‌ಲೈನ್ ಬುಕ್ಕಿಂಗ್ ಜಾರಿಗೆ ತಂದರೆ ಅದನ್ನು ನಿರ್ವಹಿಸುವ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಲು ಆರಂಭಿಸಿ ಜನರಿಗೆ ತೊಂದರೆ ಆದರೆ ನಾವು ಡಿಸಿ, ಎಸ್ಪಿ, ಪ್ರವಾಸೋದ್ಯಮದವರನ್ನು ಭೇಟಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಜಿಲ್ಲಾಡಳಿತ ಆನ್‌ಲೈನ್ ನೋಂದಾವಣೆಯನ್ನು ನಮ್ಮೆಲ್ಲರ ಸಮಕ್ಷಮದಲ್ಲಿ ಸಾಧಕ ಬಾಧಕಗಳನ್ನು ಚರ್ಚೆಮಾಡದೆ ಏಕಪಕ್ಷೀಯವಾಗಿ ಜಾರಿಗೆ ತಂದಿದೆ. ಇದು ಸಮಂಜಸವಲ್ಲ. ಈ ನಿರ್ಧಾರವನ್ನು ಕೈಬಿಟ್ಟು ಬೇರೆ ಮಾರ್ಗೋಪಾಯವನ್ನು ಕಂಡುಕೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.