ಹಾಸನ: ಆಷಾಢಕ್ಕೆಂದು ತವರು ಮನೆಗೆ ತೆರಳಿದ್ದ ಪತ್ನಿ ಹಣ ತರದೆ ಬರಿಗೈಯಲ್ಲಿ ಮರಳಿದ್ದಾಳೆಂಬ ಆಕ್ರೋಶದಿಂದ ಪತಿಯೊಬ್ಬನು ಪತ್ನಿಗೆ ದೈಹಿಕ ಹಲ್ಲೆ ನಡೆಸಿ, ಸೀಮೆ ಎಣ್ಣೆ ಸುರಿದು ಕೊಲೆ ಯತ್ನ ಮಾಡಿರುವ ಅಮಾನವೀಯ ಘಟನೆ ಸಕಲೇಶಪುರ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

ಹೊಸರು ಗ್ರಾಮದ ಶ್ರೀಮಂತ್ ಎಂಬಾತ ತನ್ನ ಪತ್ನಿ ಶೆಟ್ಟಿಹಳ್ಳಿ ಗ್ರಾಮದ ಸುಷ್ಮಿತಾ ಮೇಲೆ ಈ ಕ್ರೂರ ಕೃತ್ಯ ಎಸಗಿದ್ದಾನೆ. ಆರು ತಿಂಗಳ ಹಿಂದೆ ಮದುವೆಯಾಗಿದ್ದ ದಂಪತಿಯಲ್ಲಿ ಶ್ರೀಮಂತ್ ನಿತ್ಯ ಪತ್ನಿಗೆ ವರದಕ್ಷಿಣೆ ತರಬೇಕೆಂದು ಮಾನಸಿಕ ಹಾಗೂ ದೈಹಿಕ ಪೀಡೆ ನೀಡುತ್ತಿದ್ದ. ಜೆಸಿಬಿ ಖರೀದಿ ಮಾಡಲು 5 ಲಕ್ಷ ರೂ. ಸಾಲ ಮಾಡಿಕೊಂಡಿರುವ ಆತನು, ತವರು ಮನೆಯವರಿಂದ ಕಾರು ಮತ್ತು ಹಣ ತರುವಂತೆ ಬಲವಂತ ಮಾಡುತ್ತಿದ್ದ.

ಆಷಾಢ ಮುಗಿಸಿ ಸುಷ್ಮಿತಾ ಖಾಲಿಹಸ್ತದಿಂದ ತವರಿಗೆ ಬಂದಿದ್ದುದರಿಂದ ಕೋಪಗೊಂಡ ಪತಿ ಮನಬಂದಂತೆ ಥಳಿಸಿ, ನಂತರ ಸೀಮೆ ಎಣ್ಣೆ ಸುರಿದು ಬೆಂಕಿ ಹಾಕಲು ಯತ್ನಿಸಿದ. ಅದೃಷ್ಟವಶಾತ್ ಸುಷ್ಮಿತಾ ತಕ್ಷಣವೇ ಹೊರಟು ಬಚಾವಾಗಿ ಪ್ರಾಣಾಪಾಯದಿಂದ ಪಾರಾದರು. ಗಾಯಾಳು ಮಹಿಳೆಯನ್ನು ತಕ್ಷಣ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.