ಮೂಡಿಗೆರೆ: ಸಾರ್ವಜನಿಕ ಹಿಂದೂ ಮಹಾಗಣಪತಿ ಸೇವಾ ಸಮಿತಿ ಆಯೋಜಿಸಿದ್ದ ಭಗವಧ್ವಜ ಕಟ್ಟೆ, ಗುದ್ದಲಿ ಪೂಜೆ ಹಾಗೂ ಗಣಪತಿ ಲೋಗೋ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೈ ಶಾಸಕಿ ನಯನಾ ಮೋಟಮ್ಮ ಅವರು ಭಾಗಿಯಾಗಿದ್ದಕ್ಕಾಗಿ ಪರ- ವಿರೋಧ ವ್ಯಕ್ತವಾಗಿದ್ದು ಈ ಕುರಿತು ಮಾಜಿ ಸಚಿವೆ, ಹಾಗೂ ಶಾಸಕಿ ತಾಯಿ ಮೋಟಮ್ಮನವರು ಈ ಬಗ್ಗೆ ಮೌನ ಮುರಿದು ಸಮರ್ಥನೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೋಟಮ್ಮ ಅವರು, ಹಿಂದುತ್ವ ಯಾವುದೇ ಸಂಘಟನೆಯ ಪಕ್ಷದ ಗುತ್ತಿಗೆ ಪಡೆದಿಲ್ಲ, ಯಾರ ಸ್ವತ್ತು ಅಲ್ಲ, ಕಾಂಗ್ರೆಸ್ ಪಕ್ಷ ಹಿಂದುತ್ವದ ವಿರೋಧಿಯಲ್ಲ ಎಂಬುದನ್ನು ತೋರಿಸಲು ಶಾಸಕಿ ನಯನಾ ಮೋಟಮ್ಮ ರಂಗಮಂದಿರದಲ್ಲಿ ನಡೆದ ಸಾರ್ವಜನಿಕ ಮಹಾಗಣಪತಿ ಲಾಂಛನದ ಬಿಡುಗಡೆ ಕಾರ್ಯಕ್ರಮಕ್ಕೆ ಸಮಿತಿಯ ಕಾರ್ಯಾಧ್ಯಕ್ಷೆಯಾಗಿ ಭಾಗವಹಿಸಿದ್ದಾರೆ ಎಂದರು.

ಮಹಾ ಗಣಪತಿ ಸಮಿತಿ ಮತ್ತು ದುರ್ಗಾ ಸೇವಾ ಸಮಿತಿ ಈ ಎರಡೂ ಸಮಿತಿಗಳಿಗೂ ಶಾಸಕರಾದವರು ಕಾರ್ಯಾಧ್ಯಕ್ಷರಾಗಿರುತ್ತಾರೆ. ಕಾವಿ ಶಾಲು ಧರ್ಮದೇವರು ಯಾವುದೇ ವರ್ಗಕ್ಕೂ ಸೀಮಿತಗೊಳಿಸಿಲ್ಲ. ಆ ದೃಷ್ಟಿಯಿಂದ ಶಾಸಕಿ ಆದವರಿಗೆ ಸಮಾಜದ ಎಲ್ಲ ಧರ್ಮದವರು ಸಮಾನರು ಎಂದರು.
ಪ್ರಮೋದ್ ಮುತಾಲಿಕ್ ಅವರೊಂದಿಗೆ ಶಾಸಕಿ ನಯನಾ ಅವರು ವೇದಿಕೆ ಹಂಚಿಕೊಂಡಿದ್ದನ್ನು ಮಾಜಿ ಸಚಿವೆ ಮೋಟಮ್ಮ ಸಮರ್ಥಿ ಸಿಕೊಂಡು ನಾನೂ ಕೂಡಾ ಹಲವಾರು ಬಾರಿ ಕೇಸರಿ ಬಣ್ಣದ ಸೀರೆ ಧರಿಸಿದ್ದೇನೆ. ಕೇಸರಿ ಸೀರೆ ಧರಿಸಿದರೆ ಅಥವಾ ಶಾಲು ಹೊದ್ದುಕೊಂಡ ಮಾತ್ರಕ್ಕೆ ನನ್ನ ಸಿದ್ದಾಂತ ಬದಲಾವಣೆಯಾಗದು. ಗಣಪತಿ ಸಮಿತಿಯ ಕೆಲ ವಿದ್ಯಾಮಾನಗಳನ್ನು ಸರಿಪಡಿಸಿ ಎಲ್ಲ ಹಿಂದೂಗಳು ಒಟ್ಟಾಗಿ ಸಾರ್ವಜನಿಕ ಗಣಪತಿ ಉತ್ಸವವನ್ನು ಆಚರಿಸುವ ಸದುದ್ದೇಶದಿಂದ ಸಮಿತಿಗೆ ಕಾರ್ಯಾಧ್ಯಕ್ಷೆಯಾಗಿ ಹೋಗಿದ್ದಾರೆ.
ಕುಂಭಮೇಳದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸ್ಪೀಕರ್ ಯು.ಟಿ.ಖಾದರ್ ಭಾಗವಹಿಸಿದ್ದರು. ಅವರವರ ನಂಬಿಕೆಯಂತೆ ಎಲ್ಲಾ ಕಡೆಗೂ ಎಲ್ಲಾ ಧರ್ಮಿಯರು ಹೋಗುತ್ತಾರೆ. ಅದನ್ನು ವಿವಾದವನ್ನಾಗಿ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.