ಹಾಸನ: ನಗರದ ಖಾಸಗಿ ಬ್ಯಾಂಕ್ನ ನೌಕರರೊಬ್ಬರ ಮನೆಯಲ್ಲಿ 1 ಕೆಜಿ ಚಿನ್ನ ಹಾಗೂ 15 ಲಕ್ಷಕ್ಕೂ ಹೆಚ್ಚಿನ ನಗದನ್ನು ಕಳ್ಳರು ಕದ್ದೊಯ್ದಿದ್ದಾರೆ.
ಸದಾಶಿವನಗರದ ನವೀನ್ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆಂದು ಬ್ಯಾಂಕ್ ಲಾಕರ್ನಿಂದ ತಂದಿದ್ದ ಕೋಟ್ಯಂತರ ರೂ. ಬೆಲೆ ಬಾಳುವ ಚಿನ್ನ, ಬೆಳ್ಳಿ ಆಭರಣ ಹಾಗೂ 15 ಲಕ್ಷಕ್ಕೂ ಹೆಚ್ಚಿನ ನಗದನ್ನು ಕಳ್ಳರು ದೋಚಿದ್ದಾರೆ. ಗುರುವಾರ ರಾತ್ರಿ ನವೀನ್ ಕುಟುಂಬಸ್ಥರು ಮನೆಗೆ ಬೀಗ ಹಾಕಿ ತೆರಳಿದ್ದರು. ಶನಿವಾರ (ಆ.23) ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಮನೆ ಬಾಗಿಲು ಮುರಿದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ನವೀನ್ ಈಗ ವಾಸವಿದ್ದ ಮನೆ ಎದುರು ಹೊಸ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಮನೆ ನಿರ್ಮಾಣಕ್ಕಾಗಿ ಹಣ ಹೊಂದಿಸಿಟ್ಟುಕೊಂಡಿದ್ದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
