ಜಯಪುರ: ನಗರದ ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಗಸ್ಟ್ 25 ರಂದು ನಡೆದ ವಿಶೇಷ ಉಪನ್ಯಾಸದಲ್ಲಿ ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯ ಸಹಾಯಕ ಪ್ರಾಧ್ಯಕ್ಷರಾದ ಡಾ. ಕ್ಷಮ ಎ. ವಿ ಇವರು ಪ್ರಾದೇಶಿಕ ಆರ್ಥಿಕತೆ ಮತ್ತು ಉದ್ಯಮ ಅವಕಾಶಗಳು ಕುರಿತಾಗಿ ವಿಶೇಷ ಉಪನ್ಯಾಸವನ್ನು ನೀಡಿದರು.

ಹೌದು .. ಪ್ರಾದೇಶಿಕ ಆರ್ಥಿಕತೆಯ ಕುರಿತಾಗಿ ಸವಿಸ್ತಾರವಾಗಿ ವಿವರಿಸಿ ಅದರಿಂದ ರಾಷ್ಟ್ರದ ಆರ್ಥಿಕತೆಗೆ ಆಗುವ ಲಾಭಗಳು ಮತ್ತು ವ್ಯಕ್ತಿಗತ ಆದಾಯದ ಅಭಿವೃದ್ಧಿಯ ಬಗ್ಗೆ ತಿಳಿಸಿದರು. ಹಾಗೆ ಸಹಕಾರ ಸಂಘ ಮತ್ತು ಸ್ವಸಹಾಯ ಸಂಘಗಳ ಮೂಲಕ ಉದ್ಯಮ ನಿರ್ವಹಿಸುವ ವಿಷಯದ ಕುರಿತು ಕೃಷಿ, ಪ್ರವಾಸೋದ್ಯಮ, ಸಣ್ಣ ಕೈಗಾರಿಕೆ ಮತ್ತು ಗುಡಿ ಕೈಗಾರಿಕೆಯ ಉದ್ಯಮವನ್ನು ಕಟ್ಟುವುದು ಮತ್ತು ನಿರ್ವಹಿಸುವುದರ ಜೊತೆಗೆ ಪ್ರಾದೇಶಿಕವಾಗಿ ಉದ್ಯೋಗ ಸೃಷ್ಟಿಸುವುದರ ಬಗ್ಗೆಯೂ ತಿಳಿಸಿಕೊಟ್ಟರು.
ಇದರ ಜೊತೆ ಜೊತೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮತ್ತು ಅವುಗಳ ಸಮರ್ಪಕ ಬಳಕೆಯ ಕುರಿತು ತಿಳಿಸಿಕೊಟ್ಟು ನಂತರ ಉದ್ಯಮದಲ್ಲಿ ಪರಿಸರಸ್ನೇಹಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಸಹ ತಿಳಿಸಿದರು. ಹಾಗೆ ಸರ್ಕಾರದ ಸೌಲಭ್ಯಗಳು ಮತ್ತು ಪ್ರಾದೇಶಿಕ ಸಂಪನ್ಮೂಲಗಳ ಅಗತ್ಯತೆಯ ಕುರಿತಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ವ್ಯವಹಾರದ ಉದ್ದೇಶಗಳನ್ನು ತಿಳಿಸಿ ಲಾಭಗಳಿಕೆಯೊಂದೇ ವ್ಯವಹಾರವಲ್ಲ, ದೇಶ, ಪ್ರಾದೇಶಿಕತೆ ಮತ್ತು ಪರಿಸರದ ಅಭಿವೃದ್ಧಿಯು ಕೂಡ ಒಬ್ಬ ಉತ್ತಮ ಉದ್ಯಮಿಯ ಲಕ್ಷಣವೆಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮುಷ್ತಾಕ್ ಅಹಮದ್ ಅವರು ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಹುಡುಕುವುದಕ್ಕಿಂತ ಸ್ವಂತವಾಗಿ ಉದ್ಯಮಗಳನ್ನು ಸ್ಥಾಪಿಸಿ ಹಲವು ಜನರಿಗೆ ಉದ್ಯೋಗವನ್ನು ನೀಡುವಂತಾಗಬೇಕು ಈ ಮೂಲಕ ಪ್ರಾದೇಶಿಕ ಅಭಿವೃದ್ಧಿಯ ಜೊತೆಗೆ ರಾಷ್ಟ್ರದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕೆಂದು ಹೇಳಿದರು.
ಹಾಗೆ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಸುದರ್ಶನ್ ಡಿ. ಹೆಗ್ಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿಗಳಾದ ರಶ್ಮಿತ, ಅಪರ್ಣ ಪ್ರಾರ್ಥಿಸಿದರು. ಅನನ್ಯ ಜಿ. ಎಲ್ಲರನ್ನೂ ಸ್ವಾಗತಿಸಿದರು, ಪ್ರಾರ್ಥನಾ ವಂದಿಸಿದರು, ರಮ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.
