Wednesday, February 11, 2026
Homeಜಿಲ್ಲಾಸುದ್ದಿಮೂಡಿಗೆರೆ: ಕಾಫಿ ಬೆಳೆಗಾರರ ವಿರುದ್ಧ ಬ್ಯಾಂಕ್ ಅಧಿಕಾರಿಗಳ ವ್ಯವಸ್ಥಿತ ಷಡ್ಯಂತ್ರ, ಸರ್ಫೇಸಿ ಕಾಯಿದೆ ದುರ್ಬಳಕೆ: ರೈತರ...

ಮೂಡಿಗೆರೆ: ಕಾಫಿ ಬೆಳೆಗಾರರ ವಿರುದ್ಧ ಬ್ಯಾಂಕ್ ಅಧಿಕಾರಿಗಳ ವ್ಯವಸ್ಥಿತ ಷಡ್ಯಂತ್ರ, ಸರ್ಫೇಸಿ ಕಾಯಿದೆ ದುರ್ಬಳಕೆ: ರೈತರ ಆರೋಪ

ಮೂಡಿಗೆರೆ: ಕಾಫಿ ಬೆಳೆಗಾರರ ವಿರುದ್ಧ ಬ್ಯಾಂಕ್ ಅಧಿಕಾರಿಗಳ ವ್ಯವಸ್ಥಿತ ಷಡ್ಯಂತ್ರ ರೂಪಿಸಿದ್ದು ಸರ್ಫೇಸಿ ಕಾಯಿದೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ.

ಕೃಷಿ ಸಂಬಂಧಿತ ಚಟುವಟಿಕೆಗಳಿಗಾಗಿ ಹಾಗೂ ಕೃಷಿ ಅಭಿವೃದ್ದಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ನಲ್ಲಿ ಸಾಲ ಪಡೆದು ಮರುಪಾವತಿ ಮಾಡದ ಕಾಫೀ ಬೆಳೆಗಾರರ ಮೇಲೆ ಬ್ಯಾಂಕ್ ಅಧಿಕಾರಿಗಳು ಸರ್ಫೇಸಿ ಕಾಯಿದೆಯನ್ನು ಕಾನೂನು ಬಾಹಿರವಾಗಿ ಬಳಸಿಕೊಂಡು ಸವಾರಿ ಮಾಡಲು ಹೊರಟಿರುವುದು ದೇಶದ ಕಾನೂನಿಗೆ, ಕಾಯಿದೆಗೆ ಬ್ಯಾಂಕ್ ಅಧಿಕಾರಿಗಳು ನೀಡುತ್ತಿರುವ ಅಗೌರವ ಎಂದು ರೈತರು ಆರೋಪಿಸಿದ್ದಾರೆ.

ಹವಾಮಾನ ವೈಪರೀತ್ಯ, ಕಾಪಿ ಮಾರುಕಟ್ಟೆಯಲ್ಲಿನ ಏರಿಳಿತ, ಕೃಷಿ ಉಪಕರಣಗಳು, ಸಲಕರಣೆಗಳು ಹಾಗೂ ಬೇಕಾಗುವ ಪೋಷಕಾಂಶಗಳ ಬೆಲೆ ಏರಿಕೆ, ನಿರ್ವಹಣಾ ವೆಚ್ಚ, ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದ ಬೆಳೆಗಾರರ ಮೇಲೆ ಮತ್ತೊಂದು ಸಮಸ್ಯೆ ಎಂಬಂತೆ ಸರ್ಫೇಸಿ ಕಾಯಿದೆಯನ್ನು ಕಾಫೀ ಕೃಷಿ ಸಾಲದ ಮೇಲೆ ಹೇರಲು ಬ್ಯಾಂಕ್ ಅಧಿಕಾರಿಗಳು ಹೊರಟಿರುವುದು ಅಕ್ಷಮ್ಯ ಹಾಗೂ ಬ್ಯಾಂಕ್ ಅಧಿಕಾರಿಗಳು ನಡೆಸುತ್ತಿರುವ ಕ್ರಿಮಿನಲ್ ಚಟುವಟಿಕೆ ಎಂದೇ ಭಾವಿಸಬೇಕಾದ ಅನಿವಾರ್ಯತೆ ಎದುರಾಗಿದೆ

ಈ ಕಾಯಿದೆಯನ್ನು ದುರ್ಬಳಕೆ ಮಾಡಿಕೊಂಡು, ಬ್ಯಾಂಕ್ ಅಧಿಕಾರಿಗಳು ಬೆಳೆಗಾರರಿಗೆ, ಸರ್ಫೇಸಿ ಕಾಯಿದೆಯು ಕಾಫೀ ಕೃಷಿ ಸಾಲಕ್ಕೆ ಅನ್ವಯವಾಗಲಿದೆ ಎಂದು, ಓಟಿಎಸ್ ಯೋಜನೆಗೂ ಅವಕಾಶ ನೀಡದೇ, ನೋಟಿಸ್ ತಲುಪಿದ 60 ದಿನಗಳೊಳಗಾಗಿ ಅಸಲು, ಬಡ್ಡಿ, ಚಕ್ರಬಡ್ಡಿಗಳನ್ನೆಲ್ಲಾ ಸೇರಿಸಿ ಪಡೆದುಕೊಂಡಿದ್ದ ಸಾಲದ 3 ರಿಂದ 5 ಪಟ್ಟು ಸಂಪೂರ್ಣವಾಗಿ ತೀರುವಳಿ ಮಾಡಬೇಕು ತಪ್ಪಿದಲ್ಲಿ ತಮ್ಮ ಕೃಷಿ ಭೂಮಿಯನ್ನು ಸರ್ಫೇಸಿ ಕಾಯಿದೆ ಅಡಿಯಲ್ಲಿ ಆನ್ಲೈನ್ ಮೂಲಕ ಹರಾಜು ಹಾಕಲಾಗುವುದು ಎಂದು ಬೆಳೆಗಾರರನ್ನು ಹೆದರಿಸಿ ಸಾಲ ವಸೂಲಿ ಮಾಡುವ ಪ್ರಕ್ರಿಯೆಯನ್ನು ನಡೆಸಿದ್ದಾರೆ

ಜೊತೆಯಲ್ಲಿ ಕೆಲವೊಂದು ಏಜೆನ್ಸಿಗಳಿಗೂ ಜವಾಬ್ದಾರಿಗಳನ್ನು ವಹಿಸಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಈ ಷಡ್ಯಂತ್ರಕ್ಕೆ ಬಲಿಯಾದ ಕೆಲವು ಬೆಳೆಗಾರರು ತಮ್ಮ ಜಮೀನುಗಳನ್ನು ಮಾರಿ, ಚಿನ್ನಾಭರಣಗಳನ್ನು ಅಡಮಾನವಿಟ್ಟು, ಕೈಸಾಲಗಳನ್ನು ಮಾಡಿ ಒಂದು ಸಮಸ್ಯೆಯಿಂದ ಪಾರಾಗಲು ಹತ್ತಾರು ಸಮಸ್ಯೆಗಳನ್ನು ತಂದುಕೊಂಡಿದ್ದಾರೆ, ಇಂತಹ ಪರಿಸ್ಥಿತಿಗೆ ಈ ಅಧಿಕಾರಿಗಳು ತಂದಿಟ್ಟಿದ್ದಾರೆ, ಬೆಳೆಗಾರರಲ್ಲಿ ಸಾಲ ಮರುಪಾವತಿಯ ಬಗ್ಗೆ ಯಾವುದೇ ವಿರೋಧವಿಲ್ಲ ಆದರೆ ಓಟಿಎಸ್ ಯೋಜನೆಗೂ ಅವಕಾಶ ನೀಡದೆ, ಅಥವಾ ಕಂತುಗಳಲ್ಲಿ ಸಾಲ ಮರುಪಾವತಿ ಅವಕಾಶಗಳನ್ನು ನೀಡದೆ ಏಕಾಏಕಿ ಸರ್ಫೇಸಿ ಕಾಯಿದೆಯನ್ನು ಕಾನೂನು ಬಾಹಿರವಾಗಿ ಬಳಸಿಕೊಂಡು ಕೇವಲ 60 ದಿನಗಳಲ್ಲಿ ಸಂಪೂರ್ಣ ಸಾಲ ತೀರುವಳಿ ಮಾಡಬೇಕು ಎಂದು ಕೃಷಿಕರ ಮೇಲೆ ಬಳಸಬಾರದ ಕಠಿಣ ಕಾಯಿದೆಯನ್ನು ಬಳಸುತ್ತಿರುವುದು ಖಂಡಿತ ವ್ಯವಸ್ಥೆಯಲ್ಲಿನ ಲೋಪವಾಗಿದೆ.

ಹಾಗೆಯೇ ರೈತರ ಮನೆಗಳಿಗೆ, ಜಮೀನುಗಳಿಗೆ ಸ್ವಾಧೀನ ಪತ್ರಗಳನ್ನು ಸಹ ಅಂಟಿಸಿರುತ್ತಾರೆ ಹಾಗೆಯೇ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಸಹ ನೀಡಿರುತ್ತಾರೆ, ಸರ್ಫೇಸಿ ಕಾಯಿದೆ ಅಡಿಯಲ್ಲಿ ಕೃಷಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ಅಧಿಕಾರವನ್ನು ಈ ಬ್ಯಾಂಕ್ ಅಧಿಕಾರಿಗಳಿಗೆ ಕೊಟ್ಟವರಾರು ? ಯಾವುದೇ ಮಾನದಂಡವಿಲ್ಲದೇ ಬ್ಯಾಂಕ್ ಗಳು ಈ ರೀತಿಯ ದುಸ್ಸಾಹಸಕ್ಕೆ ಕೈ ಹಾಕಿರುವುದು ವಿಪರ್ಯಾಸ.

ಸರ್ಫೇಸಿ ಕಾಯಿದೆ 2002 ಸೆಕ್ಷನ್ 31(J) ನಲ್ಲಿ ಕೃಷಿ ಭೂಮಿಯಲ್ಲಿ ರಚಿಸಲಾದ ಯಾವುದೇ ಭದ್ರತಾ ಹಿತಾಸಕ್ತಿಗೆ (Any security interest created in agricultural land) ಸರ್ಫೇಸಿ ಕಾಯಿದೆ 2002 ಅನ್ನು ಬಳಸುವ ಹಾಗೆ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ ಹಾಗೆಯೇ ಚಿಕ್ಕಮಗಳೂರು-ಉಡುಪಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಸಂಸತ್ತಿನಲ್ಲಿ ಕಾಫೀ ಕೃಷಿಯು ಸರ್ಫೇಸಿ ಕಾಯಿದೆ ಅಡಿಯಲ್ಲಿ ಬರುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ವಾಣಿಜ್ಯ ಹಾಗೂ ಕೈಗಾರಿಕಾ ಮಂತ್ರಿಗಳಾದ ಪೀಯೂಷ್ ಘೋಯಲ್ ಅವರು ಕಾಫೀ ಕೃಷಿಯು ಸರ್ಫೇಸಿ ಕಾಯಿದೆ ಅಡಿಯಲ್ಲಿ ಬರುವುದಿಲ್ಲ ಎಂದು ಉತ್ತರಿಸಿರುತ್ತಾರೆ. ಆದರೂ ಸಹ ಬ್ಯಾಂಕ್ ಅಧಿಕಾರಿಗಳು ಇದ್ಯಾವುದನ್ನು ಲೆಕ್ಕಿಸದೇ ತಾವುಗಳೇ ರಿಯಲ್ ಎಸ್ಟೇಟ್ ಏಜೆಂಟರಂತೆ ಅನಧಿಕೃತ ವ್ಯಕ್ತಿಗಳಿಗೆ ಕುಮ್ಮಕ್ಕು ನೀಡಿ ರೈತರ ಜಮೀನುಗಳನ್ನು ಅತೀ ಕಡಿಮೆ ದರಗಳಿಗೆ ಕೊಂಡುಕೊಳ್ಳುವಂತೆ ವ್ಯವಸ್ಥಿತ ಪಿತೂರಿ ನಡೆಸುತ್ತಿರುತ್ತಾರೆ.

ಇದರಲ್ಲಿ ಈ ಅಧಿಕಾರಿಗಳ ಪಾಲುಧಾರಿಕೆಯ ಬಗ್ಗೆ ಸಂಶಯ ವ್ಯಕ್ತವಾಗುವುದು ಸಹಜ. ಸರ್ಫೇಸಿ ಕಾಯಿದೆ ಅಡಿಯಲ್ಲಿ ಕೃಷಿ ಜಮೀನುಗಳನ್ನು ಹರಾಜು ಹಾಕುವ ಅಧಿಕಾರ ಬ್ಯಾಂಕ್ ಗಳಿಗೂ ಇಲ್ಲ, ಅದನ್ನ ಕೊಂಡುಕೊಳ್ಳುವ ಅವಕಾಶ ಖರೀದಿದಾರರಿಗೂ ಇರುವುದಿಲ್ಲ,

ಯಾಕೆಂದರೆ ಕಾಫೀ ಕೃಷಿ ಭೂಮಿಯ ಸಾಲವು ಸರ್ಫೇಸಿ ಕಾಯಿದೆ ವ್ಯಾಪ್ತಿಯಲ್ಲಿ ಬರುವುದಿಲ್ಲ.

ಬೆಳೆಗಾರರು ಸರ್ಫೇಸಿ ಕಾಯಿದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಸಂಘಟಿತ ಹೋರಾಟ ಮಾಡುವ ಅವಶ್ಯಕತೆ ಇರುವುದಾಗಿ ರೈತರು ತಿಳಿಸಿದ್ದಾರೆ

ಕೃಷಿ ಸಾಲಕ್ಕೆ ಸರ್ಫೇಸಿ ಕಾಯಿದೆಯನ್ನು ಹೇರುವ ಅವಕಾಶ ಇಲ್ಲ ಎಂದು ಕಾಯಿದೆಯಲ್ಲಿ ಸ್ಪಷ್ಟವಾಗಿ ತಿಳಿಸಿರುವುದರಿಂದ ಸರ್ಫೇಸಿ ಕಾಯಿದೆಯಿಂದ ಕಾಫೀ ಕೃಷಿ ಸಾಲವನ್ನು ಹೊರಗಿಡುವಂತೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸುವ ಅಗತ್ಯ ಇರುವುದಿಲ್ಲ

ಬದಲಾಗಿ ಕಾಫೀ ಬೆಳೆಗಾರರನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತ ಪಿತೂರಿ ನಡೆಸುತ್ತಿರುವ ಬ್ಯಾಂಕ್ ಗಳು ಹಾಗೂ ಬ್ಯಾಂಕ್ ಅಧಿಕಾರಿಗಳ ಮೇಲೆ ಹಾಗೂ ಬ್ಯಾಂಕ್ ಗಳ ಜೊತೆ ಸಾಲ ವಸೂಲಾತಿ ಕೆಲಸಕ್ಕೆ ನೇಮಕವಾಗಿರುವ ಏಜೆನ್ಸಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುವ ಅಗತ್ಯವಿದೆ, ಇಂತಹ ಅಧಿಕಾರಿಗಳಿಂದ ನೊಂದಿರುವ ಬೆಳೆಗಾರರು ಇವರುಗಳ ಮೇಲೆ ಮಾನನಷ್ಟ ಮೊಕದ್ದಮೆಗಳನ್ನು ಹೂಡಿದರೂ ಯಾವುದೇ ತಪ್ಪಿಲ್ಲ.

ಹಾಗೂ ಬೆಳೆಗಾರರಿಗೆ ಸೂಕ್ತ ಪ್ಯಾಕೇಜ್ ನೀಡಿ ಸುಸ್ತಿ ಸಾಲಗಾರ ಬೆಳೆಗಾರರಿಗೆ ಓಟಿಎಸ್ ಮೂಲಕ ಸಾಲ ಮರುಪಾವತಿ ಮಾಡಲು ನಾಲ್ಕೈದು ಕಂತುಗಳಲ್ಲಿ ಕಟ್ಟಲು ಜೊತೆಗೆ ಒಂದಷ್ಟು ಕಾಲಾವಕಾಶಗಳನ್ನು ನೀಡಿ ಬೆಳೆಗಾರರನ್ನು ಋಣಮುಕ್ತರನ್ನಾಗಿಸಬೇಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನಕ್ಕೆ ತರಬೇಕಾದ ಅವಶ್ಯಕತೆ ಇದೆ.

ಬೆಳೆಗಾರರು ಸಂಘಟಿತರಾಗದಿದ್ದಲ್ಲಿ ಇಂತಹ ಅಧಿಕಾರಿಗಳು ಬೆಳೆಗಾರರ ಮೇಲೆ ಇನ್ನಷ್ಟು ತಂತ್ರಗಳನ್ನು ರೂಪಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಆರೋಪಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!