ಮೂಡಿಗೆರೆ: ಪ್ರತಿ ವರ್ಷ ಅದ್ದೂರಿಯಾಗಿ ನಡೆಯುವ ಗಣೇಶೋತ್ಸವ ವಿಸರ್ಜನೆ ಮೆರವಣಿಗೆಯಲ್ಲಿ ಡಿಜೆ ಸೌಂಡ್ ವ್ಯವಸ್ಥೆಯನ್ನು ನಿಷೇಧಿಸಿರುವ ಕ್ರಮವನ್ನು ಪ್ರವೀಣ್ ಪೂಜಾರಿ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಇಡೀ ರಾಜ್ಯಕ್ಕೆ ಒಂದೇ ಕಾನೂನು ಆದರೆ ನಮ್ಮ ಜಿಲ್ಲೆಗೆ ಮಾತ್ರ ವಿಶೇಷ ಕಾನೂನು ಏಕೆ ಎಂದು ಪ್ರಶ್ನಿಸಿದರು. ಹಬ್ಬದ ಸಂಭ್ರಮಕ್ಕೆ ಮೆರಗು ನೀಡುತ್ತಿದ್ದ ಡಿಜೆ ವ್ಯವಸ್ಥೆಯನ್ನು ತಡೆಯುವುದು ನ್ಯಾಯೋಚಿತವಲ್ಲ.
ಈ ನಿರ್ಧಾರವು ಉತ್ಸವದ ಉತ್ಸಾಹವನ್ನು ಕುಗ್ಗಿಸುವುದಲ್ಲದೆ, ಡಿಜೆ ವೃತ್ತಿಯಲ್ಲಿ ತೊಡಗಿರುವವರ ಜೀವನೋಪಾಯಕ್ಕೂ ದೊಡ್ಡ ಹೊಡೆತವಾಗಿದೆ. ಅವರು ಕೇವಲ 13 ರಿಂದ 15 ದಿನಗಳ ಅವಧಿಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುತ್ತಿದ್ದರು. ಇದೀಗ ಆ ಅವಕಾಶವನ್ನು ಕಸಿದುಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಹಾಗೆ ಅದೆಷ್ಟೋ ಕುಟುಂಬಗಳು ಇಂತಹ ಹಬ್ಬ-ಕಾರ್ಯಕ್ರಮಗಳ ಮೂಲಕವೇ ಜೀವನ ಸಾಗಿಸುತ್ತಿವೆ. ಯಾವುದೋ ಒಂದು ರೀತಿಯಲ್ಲಿ ಜೀವನದ ಚಕ್ರವನ್ನು ಸಾಗಿಸುತ್ತಿರುವ ಈ ಕುಟುಂಬಗಳಿಗೆ ನ್ಯಾಯ ದೊರೆಯಬೇಕು. ಇಡೀ ಕರ್ನಾಟಕದಲ್ಲೇ ಧಾರ್ಮಿಕ ಕಾರ್ಯಕ್ರಮವಾಗಲಿ ಅಥವಾ ರಾಜಕೀಯ ಕಾರ್ಯಕ್ರಮವಾಗಲಿ ನಮ್ಮದೇ ಧ್ವನಿವರ್ಧಕ ವ್ಯವಸ್ಥೆಗಳನ್ನು ಬಳಸಿಕೊಳ್ಳುವ ಸನ್ನಿವೇಶಗಳು ಎಲ್ಲರಿಗೂ ತಿಳಿದಿವೆ. ಇಂತಹ ಸಂದರ್ಭಗಳಲ್ಲಿ ಮಾತ್ರ ಕಠಿಣ ನಿಯಮ ಜಾರಿಗೊಳಿಸುವುದು ಸಮಂಜಸವಲ್ಲ ಎಂದರು.
ಆಡಳಿತದಿಂದ ಈ ನಿಷೇಧದ ಕುರಿತಾಗಿ ಮರುಪರಿಶೀಲನೆ ಮಾಡುವಂತೆ, ಹಬ್ಬದ ಉತ್ಸಾಹ ಮತ್ತು ವೃತ್ತಿಜೀವನದ ನಡುವಣ ಸಮತೋಲನ ಕಾಪಾಡುವ ನಿರ್ಧಾರ ಕೈಗೊಳ್ಳುವಂತೆ ಒತ್ತಾಯಿಸಿದರು.
