ಹಾಸನ / ಮೈಸೂರು : ಮೊಸಳೆ ಹೊಸಹಳ್ಳಿ ಗಣೇಶೋತ್ಸವ ದುರಂತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 17 ಜನರ ಪೈಕಿ ಒಬ್ಬ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೊಸಳೆ ಹೊಸಹಳ್ಳಿ ಸರಕಾರಿ ಎಂಜಿನಿಯರಿಂಗ್ ಕಾಲೇಜಿನ 3ನೇ ವರ್ಷದ ಬಿ.ಇ. ವಿದ್ಯಾರ್ಥಿ ಆಕಾಶ್‌ಗೆ ಹಾಸನದ ಹಿಮ್ಸ್ ಆಸ್ಪತ್ರೆಯ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಅಪಘಾತದಲ್ಲಿ ಕರಳು ಹಾಗೂ ಯಕೃತ್‌ಗೆ ಹಾನಿಯಾಗಿತ್ತು. ಶನಿವಾರ ಶಸ್ತ್ರಚಿಕಿತ್ಸೆ ಮಾಡಿದರೂ ಪರಿಸ್ಥಿತಿ ವಿಷಮಿಸಿದ್ದರಿಂದ ಸೋಮವಾರ ಮೈಸೂರಿಗೆ ಸಾಗಿಸಲಾಗಿದೆ. ಆಕಾಶ್ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬಾಚಳ್ಳಿಯ ನಾಗೇಶ್-ಅರುಂಧತಿ ದಂಪತಿ ಪುತ್ರ.
ಎಂಜಿನಿಯರ್ ಕವಿತಾ ನೆರವು
ಎಂಜಿನಿಯರ್ ವಿದ್ಯಾರ್ಥಿ ಆಕಾಶ್ ಸ್ಥಿತಿ ಕೇಳಿ ಮಮ್ಮಲ ಮರುಗಿದ ಮಹಾನಗರ ಪಾಲಿಕೆ ಎಂಜಿನಿಯರ್ ಕವಿತಾ, ಎಂಜಿನಿಯರ್‌ಡೇ ನೆನಪಿನಲ್ಲಿ ಹತ್ತು ಸಾವಿರ ರೂ.ಗಳನ್ನು ಚಿಕಿತ್ಸೆಗೆಂದು ನೀಡಿದರು. ಆಕಾಶ್ ತಾಯಿಯೊಂದಿಗೆ ಮಾತನಾಡಿ, ”ನಿಮ್ಮೊಂದಿಗೆ ನಾವಿದ್ದೇವೆ,” ಎಂದು ಧೈರ್ಯ ತುಂಬಿದರು. “ಎಂಜಿನಿಯರ್ಸ್ ಡೇ ಅಂಗವಾಗಿ ಸಂಭ್ರಮಕ್ಕೆ ಬದಲು ಗಾಯಾಳು ಚಿಕಿತ್ಸೆಗೆ ಆರ್ಥಿಕ ನೆರವು ನೀಡಿದ್ದು ತೃಪ್ತಿ ತಂದಿದೆ,” ಎಂದರು.
