ಬೆಂಗಳೂರು : ಮಲೆನಾಡು ಪ್ರದೇಶಗಳಾದ ಕೊಡಗು, ಚಿಕ್ಕಮಗಳೂರು, ಹಾಸನ ಸುತ್ತಮುತ್ತ ನಾಡಿಗೆ ಲಗ್ಗೆ ಇಟ್ಟಿರುವ ಕಾಡಾನೆಗಳ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಲು ಗುಂಪಿನ ನಾಯಕತ್ವ ವಹಿಸುವ ಹೆಣ್ಣಾನೆಗಳಿಗೆ ದೇಶೀ ನಿರ್ಮಿತ ರೇಡಿಯೋ ಕಾಲರ್ ಅಳವಡಿಸಲಾಗುವುದೆಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಅರಣ್ಯ ಭವನದಲ್ಲಿ ನಡೆದ ಇನ್ಫಿಕ್ಷನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಜೊತೆಗೂಡಿ ಅಭಿವೃದ್ಧಿಪಡಿಸಿರುವ ಕರ್ನಾಟಕ-ಪರಿಶೋಧಿತ ಪತ್ತೆ ಸಾಧನ(ಕೆ.ಪಿ. ಟ್ರ್ಯಾಕರ್) ರೇಡಿಯೋ ಕಾಲರ್ಗಳನ್ನು ಬಂಡೀಪುರ ಮತ್ತು ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶದ ಅಧಿಕಾರಿಗಳಿಗೆ ಹಸ್ತಾಂತರಿಸಿ ಮಾತನಾಡಿದರು.
6395 ಆನೆಗಳನ್ನು ಹೊಂದಿರುವ ಕರ್ನಾಟಕ ದೇಶದಲ್ಲಿ ಆನೆಗಳ ಸಂಖ್ಯೆಯಲ್ಲಿ ಅಗ್ರ ಸ್ಥಾನದಲ್ಲಿದೆ. ಆದರೆ ಆನೆಗಳ ಸಂಖ್ಯೆಗೆ ಅನುಗುಣವಾಗಿ ವನ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ. ಅಮೂಲ್ಯವಾದ ಜೀವ ಉಳಿಸಲು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಸ್ಥಳೀಯರಿಗೆ ಮಾಹಿತಿ ನೀಡಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಈವರೆಗೆ ದಕ್ಷಿಣ ಆಫ್ರಿಕಾದೇಶದ ಆಫ್ರಿಕನ್ ವೈಲ್ಡ್ ಲೈಫ್ ಟ್ರಾಕಿಂಗ್ ಮತ್ತು ಜರ್ಮನಿಯ ವೆಕ್ಟ್ರೋನಿಕ್ ಸಂಸ್ಥೆಗಳಿಂದ ಈ ರೇಡಿಯೋ ಕಾಲರ್ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಸಕಾಲದಲ್ಲಿ ಈ ರೇಡಿಯೋ ಕಾಲರ್ ಲಭ್ಯವಾಗುತ್ತಿರಲಿಲ್ಲ. ಜತೆಗೆ ಒಂದು ರೇಡಿಯೋ ಕಾಲರ್ಗೆ 6.5 ಲಕ್ಷ ರೂ.ವೆಚ್ಚ ತಗಲುತ್ತಿತ್ತು. ಆದರೆ ಈಗ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ರೇಡಿಯೋ ಕಾಲರ್ ಗೆ 1.80 ಲಕ್ಷ ರೂ. ಆಗುತ್ತದೆ. ಇದು ಹೆಚ್ಚಿನ ರೇಡಿಯೋಕಾಲರ್ ಲಭ್ಯವಾಗುವಂತೆ ಮಾಡುವುದಲ್ಲದೆ, ವಿದೇಶಿ ಅವಲಂಬನೆ ಹಾಗೂ ದುಬಾರಿ ವೆಚ್ಚ ತಗ್ಗಿಸುತ್ತದೆ, ವಿದೇಶಿ ವಿನಿಮಯವನ್ನೂ ಉಳಿಸುತ್ತದೆ ಎಂದು ಹೇಳಿದರು.
ಆಮದು ರೇಡಿಯೋ ಕಾಲರ್ ತೂಕ 16 ರಿಂದ 17 ಕೆ.ಜಿ. ಇರುತ್ತಿತ್ತು. ಆದರೆ ಈಗ ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿರುವ ಕಾಲರ್ ಕೇವಲ 7 ಕೆ.ಜಿ. ತೂಕವಿರುತ್ತದೆ. ಅರಣ್ಯ ಇಲಾಖೆ ತನ್ನ ಅಗತ್ಯಗಳಿಗೆ ಅನುಗುಣವಾಗಿ ಮತ್ತು ಪರಿಸರ ಸ್ನೇಹಿಯಾದ ಕಚ್ಚಾವಸ್ತುಗಳನ್ನೇ ಬಳಸಿ ಈ ರೇಡಿಯೋ ಕಾಲರ್ ತಯಾರಿಸಿದ್ದು, ವನ್ಯಜೀವಿಗಳಿಗಾಗಲೀ, ಪರಿಸರಕ್ಕಾಗಲೀ ಅಪಾಯವಾಗುವುದಿಲ್ಲ. ಒಂದೊಮ್ಮೆ ರೇಡಿಯೋ ಕಾಲರ್ಗಳಲ್ಲಿ ದೋಷ ಕಂಡು ಬಂದರೆ ದುರಸ್ತಿ ಮಾಡಲು, ಬ್ಯಾಟರಿ, ಬಲ್ಬ್, ಸರ್ಕ್ಯೂಟ್ ಬದಲಾಯಿಸಲು ಅವಕಾಶವಿದೆ. ಆದರೆ ಆಮದು ರೇಡಿಯೋ ಕಾಲರ್ಗಳಲ್ಲಿ ಈ ಅವಕಾಶ ಇರಲಿಲ್ಲ ಎಂದರು.
ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ ರೇಡಿಯೋ ಕಾಲರ್ಗಳಿಂದ ನಮ್ಮ ಕಾಡು ಮತ್ತು ವನ್ಯಜೀವಿಗಳ ಮಾಹಿತಿ ಸೋರಿಕೆ ಆಗುವ ಅಪಾಯವೂ ಇತ್ತು. ಈಗ ದೇಶೀಯವಾಗಿ ಈ ರೇಡಿಯೋ ಕಾಲರ್ ಅಭಿವೃದ್ಧಿ ಪಡಿಸಿರುವುದರಿಂದ ಅಂಥ ಅಪಾಯ ಇರುವುದಿಲ್ಲ. ದತ್ತಾಂಶ ಕೂಡ ಸ್ಥಳೀಯ ಸರ್ವರ್ಗಳಲ್ಲಿ ಸುರಕ್ಷತವಾಗಿರುತ್ತದೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕಡೆ, ಎಪಿಸಿಸಿಎಫ್ ಕುಮಾರ್ ಪುಷ್ಕರ್ ಮತ್ತು ಅಜಿತ್ ರೆ ಉಪಸ್ಥಿತರಿದ್ದರು.
