ಬೆಂಗಳೂರು: ಬ್ಲೂ ಕಾರ್ನರ್ ನೋಟೀಸ್ ಬೆನ್ನಲೇ ದುಬೈನಿಂದ ಬೆಂಗಳೂರಿಗೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಆಗಮಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ. ಕಳೆದ 10 ದಿನಗಳಿಂದ ಕಾಣೆಯಾಗಿದ್ದ ಪ್ರಜ್ವಲ್ ರೇವಣ್ಣ, ಕೊನೆಗೂ ಬೆಂಗಳೂರಿಗೆ ಆಗಮಿಸುತ್ತಿರೋದಾಗಿ ಮಾಹಿತಿ ಸಿಕ್ಕಿದೆ. ಈ ಕುರಿತು ರಾಸಲೀಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್, ತಮ್ಮ ವಕೀಲರಿಗೆ ಕರೆ ಮಾಡಿ, ತಾನು ಬರ್ತಿರೋ ಮಾಹಿತಿಯನ್ನ ನೀಡಿದ್ದಾರೆ. ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ಬರ್ತಾರೆ ಅನ್ನೋ ಮಾಹಿತಿ ಲಭ್ಯವಾಗಿದ್ದು, ಬಂದ ಕೂಡಲೇ ಪ್ರಕರಣದಲ್ಲಿ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣರನ್ನ ಎಸ್ ಐ ಟಿ ಅಧಿಕಾರಿಗಳು ಬಂಧಿಸಲಿದ್ದು, ಆ ಬಳಿಕ ನಿರಂತರ ವಿಚಾರಣೆಗೆ ಒಳಪಡಿಸಲಿದ್ದಾರೆ.
ಪ್ರಜ್ವಲ್ ಬರುವಂತೆ ಕುಟುಂಬಸ್ಥರ ಒತ್ತಡ

ಈಗಾಗಲೇ ಪ್ರಜ್ವಲ್ ತಂದೆ, ಹಾಲಿ ಶಾಸಕ ಹೆಚ್.ಡಿ ರೇವಣ್ಣರನ್ನ ಎಸ್ ಐ ಟಿ ಅಧಿಕಾರಿಗಳು ಬಂಧಿಸಿ, ವಿಚಾರಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕುಟುಂಬದವರು ಪ್ರಜ್ವಲ್ ಗೆ ಕರೆ ಮಾಡಿ, ಬರುವಂತೆ ಒತ್ತಡ ಹೇರಿದ್ದಾರೆ ಎನ್ನಲಾಗುತ್ತಿದೆ. ಜಾಮೀನು ಸಿಗಲಿ, ಸಿಗದೇ ಇರಲಿ ಯಾವುದಕ್ಕೂ ನೀನು ಬರಲೇಬೇಕು ಅನ್ನೋ ಒತ್ತಡವನ್ನ ಭವಾನಿ ರೇವಣ್ಣ ಸೇರಿದಂತೆ ಕುಟುಂಬದ ಅನೇಕರು ಪ್ರಜ್ವಲ್ ರೇವಣ್ಣಗೆ ಹೇಳಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ
ಪ್ರಜ್ವಲ್ ಬಾರದೇ ಇದ್ರೆ ಮತ್ತಷ್ಟು ಮುಜುಗರಕ್ಕೆ ಸಿಲುಕುವ ಸಾಧ್ಯತೆ
ಪ್ರಜ್ವಲ್ ರೇವಣ್ಣ ವಿರುದ್ಧ ಈಗಾಗಲೇ ಪ್ರಕರಣಗಳ ಮೇಲೆ ಪ್ರಕರಣಗಳು ದಾಖಲಾಗುತ್ತಿದ್ದು, ಲುಕ್ ಔಟ್ ನೋಟೀಸ್ ನೀಡಿದ್ದ ಎಸ್ ಐ ಟಿ, ಆ ಬಳಿಕ ಬ್ಲೂ ಕಾರ್ನರ್ ನೋಟೀಸನ್ನ ಕೂಡ ಪ್ರಜ್ವಲ್ ರೇವಣ್ಣಗೆ ನೀಡಿದೆ. ಅಲ್ಲದೇ ಪ್ರತಿ ದಿನ ಪ್ರಜ್ವಲ್ ರೇವಣ್ಣ ಬಗ್ಗೆ ಮಾಧ್ಯಮ ಸೇರಿದಂತೆ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ಆಗುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಈ ಹಿಂದೆ ಎಂದೂ ಎದುರಿಸದ ಸವಾಲನ್ನ ಎದುರಿಸುತ್ತಿದ್ದು, ಈ ಪ್ರಕರಣದಿಂದ ಬೇಗನೇ ಹೊರಬರಬೇಕು ಅನ್ನೋ ನಿಲುವನ್ನ ದೇವೇಗೌಡರ ಕುಟುಂಬ ಹೊಂದಿದೆ. ಹೀಗಾಗಿ ಪದೇ ಪದೇ ಆಗುತ್ತಿರುವ ಮುಜಗರವನ್ನ ತಪ್ಪಿಸಿಕೊಳ್ಳಲು ಇರೋದೇ ಒಂದೇ ಮಾರ್ಗ, ಅದು ಪ್ರಜ್ವಲ್ ನನ್ನ ಎಸ್ ಐ ಟಿ ಅಧಿಕಾರಿಗಳ ಮುಂದೆ ಸರೆಂಡರ್ ಮಾಡಿಸೋದು ಅನ್ನೋ ತೀರ್ಮಾನಕ್ಕೆ ಹೆಚ್ಡಿಡಿ ಕುಟುಂಬ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣರನ್ನ, ವಿದೇಶದಿಂದ ಬರಲು ಕುಟುಂಬ ಒತ್ತಡ ಹೇರಿದೆ ಅನ್ನೋ ಮಾಹಿತಿ ಸಿಕ್ಕಿದೆ..