ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಆ ಗ್ರಾಮ ಜನರು ಕಳೆದ ನಾಲ್ಕೈದು ವರ್ಷಗಳಿಂದ ಚಿಂತಾಕ್ರಾಂತರಾಗಿದ್ದಾರೆ. ಗ್ರಾಮದಲ್ಲಿ ಆಗುತ್ತಿರುವ ಬೆಳವಣಿಗೆ ಜನತೆಯನ್ನ ಬೆಚ್ಚಿ ಬೀಳಿಸಿದೆ. ಸಾಲು ಸಾಲು ಸಾವಿನಿಂದಾಗಿ ಒಂದರ್ಥದಲ್ಲಿ ಜನ ಕಂಗಾಲಾಗಿ ಹೋಗಿದ್ದಾರೆ. ಇದೀಗ ಅದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಅಲ್ಲಿನ ಮಂದಿ ದೇವರ ಮೊರೆ ಹೋಗಿದ್ದಾರೆ.
ಇಂಥ ಪರಿಸ್ಥಿತಿ ನಿರ್ಮಾಣವಾಗಿರೋದು ಉಳ್ಳಾಲ ತಾಲೂಕಿನ ಕುಂಪಲ ಗ್ರಾಮದಲ್ಲಿ. ಈ ಗ್ರಾಮದಲ್ಲಿ 2019ರಿಂದ ಈವರೆಗೆ ಅಂದಾಜು 50ಕ್ಕೂ ಹೆಚ್ಚು ಮಂದಿ ಅಪಮೃತ್ಯುವಿಗೆ ಒಳಗಾಗಿದ್ದಾರೆ. ಹೆಚ್ಚಿನ ಮಂದಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ಇನ್ನು ಕೆಲವರು ಅಪಘಾತ, ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ಜೀವ ಕಳೆದುಕೊಂಡಿದ್ದಾರೆ. ಅದರಲ್ಲೂ ರೂಪದರ್ಶಿಯಾಗಿದ್ದ ಪ್ರೇಕ್ಷಾ ಎಂಬ ಯುವತಿಐ ಆತ್ಮಹತ್ಯೆ, ಅಶ್ವಿನಿ ಬಂಗೇರ ಎಂಬ ಯುವತಿ ಗೃಹಪ್ರವೇಶವಾದ ಐದೇ ದಿನದಲ್ಲಿ ತನ್ನದೇ ನೂತನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಗ್ರಾಮಸ್ಥರನ್ನು ಹೆಚ್ಚು ಭಯಭೀತರನ್ನಾಗಿಸಿತ್ತು.
ಈ ಸಮಸ್ಯೆಗೆ ಕಾರಣ ಏನು, ಏನಾದ್ರು ಪರಿಹಾರ ಮಾಡ್ಬೇಕಲ್ಲ ಅಂತ ಅಂದುಕೊಂಡ ಊರಿನವರು ಕುಂಪಲದ ಆದಿಶಕ್ತಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ದೈವಜ್ಞರ ಮೂಲಕ ಪ್ರಶ್ನಾ ಚಿಂತನೆಯನ್ನಿಟ್ಟರು. ಗ್ರಾಮದ ಜನತೆಯ ಸರಣಿ ಸಾವಿಗೆ ದೈವದ ಮುನಿಸೇ ಕಾರಣ ಎಂಬ ವಿಚಾರ ಗೊತ್ತಾಯಿತು. ಗ್ರಾಮದ ಜನರ ಅಕಾಲಿಕ ಮರಣಕ್ಕೆ ತಡೆ ನೀಡಲು ಮಹಾಮೃತ್ಯುಂಜಯ ಯಾಗ ನಡೆಸಲು ಸೂಚಿಸಲಾಗಿತ್ತು. ಅದರಂತೆ ಈ ಸಾವು ನೋವು ತಡೆಯಲು ಕುಂಪಲದಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಸಲಾಗಿದೆ.
ಗ್ರಾಮದ ಪೂರ್ವ ದಿಕ್ಕಿನಲ್ಲಿ ದೈವ ಸಾನಿಧ್ಯ ಇದ್ದು, ಈಗ ಅಲ್ಲಿನ ಗುಡಿ ಪಾಳು ಬಿದ್ದು ದೈವಕ್ಕೆ ಕಾಲಾದಿ ನಡೆಯುವ ಪೂಜೆ, ಪುನಸ್ಕಾರಗಳು ನಿಂತಿದೆ. ಹೀಗಾಗಿ ದೈವ ಅಸಮಾಧಾನಗೊಂಡು ತನ್ನ ರೂಪವನ್ನು ಋಣಾತ್ಮಕವಾಗಿ ತೋರಿಸುತ್ತಿದೆ ಎಂದು ತಿಳಿದುಬಂದಿದೆ. ಈ ದೈವಸ್ಥಾನ ಬೆಳಗುವ ಮೊದಲು ಗ್ರಾಮದಲ್ಲಿ ಮಹಾ ಮೃತ್ಯುಂಜಯ ಯಾಗ ನಡೆಸುವಂತೆ ಪ್ರಶ್ನೆಯಲ್ಲಿ ಕಂಡುಬಂದಿತ್ತು. ಹೀಗಾಗಿ ಮೃತ್ಯು ಪಾಶದಿಂದ ಪಾರಾಗಲು ಹಿಂದೂ ಧರ್ಮದಲ್ಲಿ ನಡೆಸಲಾಗುವ ಮಹಾ ಮೃತ್ಯುಂಜಯ ಯಾಗವನ್ನು ಕುಂಪಲದ ಚಾಮುಂಡೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಸಲಾಯಿತು.
ಕೇಸರಿ ಮಿತ್ರ ವೃಂದ ಹಾಗೂ ಗ್ರಾಮಸ್ಥರು ಸೇರಿ ಪುರೋಹಿತ ವೃಂದದ ನೇತೃತ್ವದಲ್ಲಿ, ವೇದ ಮಂತ್ರ ಪಠಣಗಳೊಂದಿಗೆ ಅತೀದೊಡ್ಡ ಯಾಗ ನಡೆಸಿದರು. 21 ದಿನಗಳ ವೃತಾಚರಣೆ ಮಾಡಿ ಭಕ್ತಿ ಭಾವದಿಂದ ಯಾಗದಲ್ಲಿ ಭಾಗಿಯಾಗಿದ್ದರು.
ಯಾಗದ ಬಳಿಕ ಉತ್ತಮ ವಾತಾವರಣ ಕಂಡುಬರುತ್ತಿದೆ. ಮುಂದೆ ನೆಮ್ಮದಿಯ ಜೀವನಕ್ಕೆ ದಾರಿಯಾಗಬಹುದೆಂಬ ಆಶಾಭಾವನೆ ಇಲ್ಲಿನ ಜನರದ್ದು.
