ದೆಹಲಿ : ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಇಂದು ನಸುಕಿನ ಜಾವ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಈವರೆಗೆ ೧೦ ಜನ ಕೊನೆಯುಸಿರೆಳೆದಿದ್ದಾರೆ. ಇದರಲ್ಲಿ ಕರ್ನಾಟಕದ ತಾಯಿ ಮಗಳು ಸೇರಿದಂತೆ ನಾಲ್ವರು ಮೃತರಾಗಿದ್ದಾರೆಂದ ಆಘಾತಕಾರಿ ವಿಚಾರ ಗೊತ್ತಾಗಿದೆ.
ಮೃತರನ್ನು ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ (50) ಹಾಗೂ ಅವರ ಮಗಳು ಮೇಘಾ ಹತ್ತರವಾಠ್, ಶಿವಾಜಿನಗರದ ನಿವಾಸಿ ಮಹಾದೇವಿ ಹನುಮಂತ ಬಾವನೂರ ಹಾಗೂ ಶೆಟ್ಟಿಗಲ್ಲಿ ನಿವಾಸಿ ಅರುಣ್ ಕೋಪರ್ಡೆ ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಇಂದು ಬೆಳಗ್ಗೆ ಪ್ರಯಾಗ್‌ರಾಜ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ.
ಸಾಯಿರಥ ಟ್ರಾವೆಲ್ ಏಜೆನ್ಸಿ ವತಿಯಿಂದ ಪ್ರಯಾಗರಾಜ್‌ಗೆ ತೆರಳಿದ್ದ 13 ಜನ ಬೆಳಗ್ಗೆ ಸ್ನಾನಕ್ಕೆ ತೆರಳುತ್ತಿದ್ದರು. ಈ ವೇಳೆ ನೂಕುನುಗ್ಗಲಿನಲ್ಲಿ ಎಲ್ಲರೂ ಚದುರಿ ಹೋಗಿದ್ದಾರೆ. ಇನ್ನು ಕರೆ ಮಾಡಿದರೂ ಒಬ್ಬರಿಗೊಬ್ಬರು ಸಂಪರ್ಕ ಸಾಧ್ಯವಾಗಲಿಲ್ಲ. ಈ ವೇಳೆ ಜ್ಯೋತಿ ಮತ್ತು ಮೇಘಾ ಅವರಿದ್ದ ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಿದೆ. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರಾವೆಲ್ ಏಜೆನ್ಸಿ ಸಿಬ್ಬಂದಿ ಆಸ್ಪತ್ರೆಗಳಿಗೆ ತೆರಳಿ ಹುಡುಕಾಡಿದಾಗ ಜ್ಯೋತಿ ಮತ್ತು ಅವರ ಮಗಳು ಮೇಘಾ ಮೃತಪಟ್ಟಿರುವ ಮಾಹಿತಿ ಸಿಕ್ಕಿದೆ. ಇನ್ನು ಅರುಣ್ ಪತ್ನಿ ಕಾಂಚನಾಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ವಿಚಾರ ತಿಳಿಯುತ್ತಿದ್ದಂತೆ ಮೃತರ ಮನೆಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಪ್ರಯಾಗ್‌ರಾಜ್ ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಪ್ರಕರಣ – ಕರ್ನಾಟಕದ ತಾಯಿ ಮಗಳು ಸೇರಿ ನಾಲ್ವರ ದುರ್ಮರಣ..!
RELATED ARTICLES