ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಈಗ ಎಲ್ಲವೂ ಸರಿ ಇಲ್ಲ ಅನ್ನೋದು ಜಗತ್ತಿಗೆ ತಿಳಿದಿರುವ ವಿಚಾರ. ಪಕ್ಷದ ಗೊಂದಲದ ಬಗ್ಗೆ ಹಲವು ನಾಯಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮಟ್ಟದ ಗೊಂದಲ ಹೆಚ್ಚುವುದಕ್ಕೆ ಕೋರ್ ಕಮಿಟಿ ಸಮರ್ಥವಾಗಿ ನಡೆಯದಿರುವುದೂ ಒಂದು ಕಾರಣ ಅಂತ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅಸಮಾಧಾನ ಹೊರಹಾಕಿದ್ದಾರೆ.
ಪಕ್ಷದ ಪ್ರಮುಖ ನಿರ್ಧಾರಗಳನ್ನು ಗಟ್ಟಿಯಾಗಿ ತೆಗೆದುಕೊಳ್ಳಬೇಕಾದ ಕೋರ್ ಕಮಿಟಿ ಸಭೆಗಳು ಚೆನ್ನಾಗಿ ನಡೆದಿಲ್ಲ. ರಾಜ್ಯ ಬಿಜೆಪಿಯಲ್ಲಿ ಕೆಳಗಿನ ಹಂತದವರೆಗೂ ಗುಂಪುಗಾರಿಕೆ ಹಬ್ಬಿದೆ. ಇದಕ್ಕೆ ಮದ್ದು ನೀಡುವ ಕೆಲಸವನ್ನು ಹೈಕಮಾಂಡ್ ಮಾಡಬೇಕು ಅಂತ ಮಾಧ್ಯಮದವರ ಜೊತೆ ಮಾತನಾಡುತ್ತಾ ಹೇಳಿದರು.
ಆಂತರಿಕವಾಗಿ ಇಷ್ಟು ದೊಡ್ಡ ಕಚ್ಚಾಟಗಳು ಇರುವ ಸಂದರ್ಭದಲ್ಲಿ ಪಕ್ಷದಲ್ಲಿನ ಎಲ್ಲ ಮನಸ್ತಾಪಗಳನ್ನು ಕೇಂದ್ರದ ನಾಯಕರು ಸರಿಪಡಿಸಬೇಕಿತ್ತು. ಆದರೆ, ಆ ಕೆಲಸ ಆಗಲಿಲ್ಲ. ಮಾಧ್ಯಮಗಳ ಬಾಯಿಗೆ ಆಹಾರ ಆಗಿದ್ದೇ ನಮ್ಮ ಮೊದಲ ವೈಫಲ್ಯ ಎಂದು ವಿಶ್ಲೇಷಿಸಿದರು. ಕಳೆದ ವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಬಹುದಿನಗಳ ನಂತರ ಉತ್ತಮ ಚರ್ಚೆಯಾಗಿದೆ. ಕಾರ್ಯಕರ್ತರ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವ ಪ್ರಯತ್ನ ನಡೆದಿದೆ ಎಂದರು.
ಪಕ್ಷದಲ್ಲಿನ ಅತೃಪ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಶಸ್ವಿಯಾಗಲಿಲ್ಲ. ಪಕ್ಷದ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ವಾಸ್ತವವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಸದಸ್ಯರು ಬಿಜೆಪಿಯಲ್ಲಿ ಉಳಿದುಕೊಂಡಿದ್ದಾರೆ ಹೊರತು ಕರ್ನಾಟಕದಲ್ಲಿನ ಬಿಜೆಪಿ ಪರಿಸ್ಥಿತಿ ನೋಡಿ ಅಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು. ಪಕ್ಷದ ಒಬ್ಬ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ತಮ್ಮ ಸ್ಥಾನದಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದಾರೆ. ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಕಾಂಗ್ರೆಸ್ಸಿಗೆ ವಲಸೆ ಹೋಗುತ್ತಾರೆ ಎಂಬ ಸುದ್ದಿ ಹಬ್ಬಿದೆ. ಇದೆಲ್ಲದರ ಬಗ್ಗೆಯೂ ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಹೊಸ ಅಧ್ಯಕ್ಷರ ನೇಮಕ ಸರ್ವ ಸಮ್ಮತದಿಂದ ಆಗಬೇಕು, ಪಾರದರ್ಶಕವಾಗಿ ಆಗಬೇಕು. ಆಗಲೇ ಪಕ್ಷಕ್ಕೆ ಶಕ್ತಿ ಬರುತ್ತದೆ. ಅದು ಚುನಾವಣಾ ಪ್ರಕ್ರಿಯೆಯಾದರೂ ನಡೆಯಲಿ ಅಥವಾ ನೇರ ಚುನಾವಣೆಯಾದರೂ ನಡೆಯಲಿ ಎಂದು ಇದೇ ವೇಳೆ ಗೌಡರು ಅಭಿಪ್ರಾಯಪಟ್ಟರು. ಪಕ್ಷದ ಶಾಸಕರ ವಿರುದ್ಧ ಕ್ರಮದ ಬಗ್ಗೆ ಹಿಂದಿನ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿತ್ತು. ಈವರೆಗೆ ಏನೂ ಆಗಲಿಲ್ಲ. ಎಸ್.ಟಿ.ಸೋಮಶೇಖರ್ ಅವರು ಬೆಳಗಾವಿಯ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದನ್ನು ನಾವು ಸುಮ್ಮನೆ ನೋಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿನ ಗೊಂದಲಕ್ಕೆ ನಮ್ಮಲ್ಲಿನ ಅಸಮರ್ಥತೆಯೇ ಕಾರಣ – ಅಸಮಾಧಾನ ಹೊರಹಾಕಿದ ಸದಾನಂದ ಗೌಡ
RELATED ARTICLES