ಬೆಂಗಳೂರು : ನನ್ನ ವಿರುದ್ಧ ಜನಾರ್ದನ ರೆಡ್ಡಿ ಹೈಕಮಾಂಡ್‌ಗೆ ದೂರು ನೀಡಿದ್ದಾರೆಂದು ಶ್ರೀರಾಮುಲು ನಿನ್ನೆ ಒಂದು ಕಾಲದ ಆಪ್ತಮಿತ್ರನ ವಿರುದ್ಧ ಆರೋಪ ಮಾಡಿದ್ದರು. ಇದೀಗ ಅದಕ್ಕೆ ಜನಾರ್ದನ ರೆಡ್ಡಿ ತಿರುಗೇಟು ನೀಡಿದ್ದಾರೆ.
ಜನಾರ್ದನ ರೆಡ್ಡಿ ಯಾರು ಅನ್ನೋದು ಬಳ್ಳಾರಿ ಜನರಿಗೆ ಗೊತ್ತು. ಶ್ರೀರಾಮುಲುವನ್ನು ಬೆಳೆಸಿದ್ದ ಜನಾರ್ದನ ರೆಡ್ಡಿ. ಇದನ್ನ ಬಳ್ಳಾರಿ ಜನ ಹೇಳ್ತಾರೆ. ಹೀಗೆ ಬೆಂಗಳೂರಿನ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ರಾಮುಲು ವಿರುದ್ಧ ಅನಿಸಿಕೆಗಳನ್ನ ವ್ಯಕ್ತಪಡಿಸಿದ್ದಾರೆ.
ಶ್ರೀರಾಮುಲು ಮಾವನನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ನಂತರ ರಾಮುಲುವನ್ನು ಕೊಲೆ ಮಾಡೋದಕ್ಕೆ ಪ್ಲಾನ್ ಮಾಡಿದ್ರು. ಅದರಿಂದ ಅವನನ್ನು ಬಚಾವ್ ಮಾಡಿದ್ದೆವು. ಮಾವನನ್ನು ಸಾಯಿಸಿದ ನಾರಾಯಣ ರೆಡ್ಡಿಯನ್ನು ನಾನು ಬಿಡಲ್ಲ, ಕೊಲೆ ಮಾಡಿಯೇ ತೀರುತ್ತೇನೆ ಅಂತ ನನ್ನ ಬಳಿ ರಾಮುಲು ಹೇಳಿದ್ದ. ಆ ಸಂದರ್ಭ ಆತನಿಗೆ ಬುದ್ಧಿ ಹೇಳಿದ್ದೆ. ಅಪರಾಧದಲ್ಲಿ ಭಾಗಿಯಾದ್ರೆ ನಂತರ ನಮಗೆ ಬೆಳೆಯೋದಕ್ಕೆ ಆಗೋದಿಲ್ಲ ಅಂತ ಹಲವು ಉದಾಹರಣೆಗಳನ್ನ ಕೊಟ್ಟು ಹೇಳಿದ್ದೆ ಅಂತ ಹಳೆ ಪ್ರಕರಣಗಳನ್ನ ನೆನಪು ಮಾಡಿಕೊಂಡಿದ್ದಾರೆ ಜನಾರ್ದನ ರೆಡ್ಡಿ.
ಯಡಿಯೂರಪ್ಪ ಸರ್ಕಾರದಲ್ಲಿ ನನ್ನನ್ನು ಸಚಿವನಾಗಲು ಆಹ್ವಾನಿಸಿದ್ರು. ಆದರೆ ನನ್ನನ್ನ ಬೇಡ ಶ್ರೀರಾಮುಲುವನ್ನ ಮಾಡಿ ಅಂತ ಆತನನ್ನು ಸಚಿವನನ್ನಾಗಿ ಮಾಡಿದ್ದು ನಾನು ಮಾಡಿದ ದ್ರೋಹ. ರಾಮುಲು ನನ್ನ ನಡುವೆ ತಾಯಿ ಮಗನ ಸಂಬಂಧ ಇತ್ತು ಅಂತ ಹೇಳಿಕೊಂಡು ಬರುತ್ತಿದ್ದೆ. ಆದ್ರೆ ಅನ್ನವುಣಿಸಿದ ತಾಯಿಯ ಎದೆಗೆ ಒದ್ದಿದ್ದಾನೆ. ನಾನು ಏನೇ ಕಷ್ಟ ಬಂದ್ರೂ ಆತನ ಪರವಾಗಿ ನಾನು ಸದಾ ನಿಲ್ಲುತ್ತಿದ್ದೆ. ನಾನು ಸಂಕಷ್ಟದಲ್ಲಿದ್ದಾಗಲೂ ಆತನ ಒಳಿತು ಬಯಸಿದ್ದೆ. ಇದು ನಾನು ಅವನಿಗೆ ಮಾಡಿದ ದ್ರೋಹ ಅಂತ ತಿರುಗೇಟು ನೀಡಿದರು.
ಉಪಚುನಾವಣೆ ಸೋಲಿನ ವಿಚಾರವಾಗಿ ನಾನು ಯಾರ ಮೇಲೂ ಆರೋಪ ಮಾಡಿಲ್ಲ. ಅಂಥ ವ್ಯಕ್ತಿಯೂ ನಾನಲ್ಲ. ಸದಾನಂದ ಗೌಡ ಅವರ ಸಮಿತಿ ಮುಂದೆ ನನ್ನ ಅಭಿಪ್ರಾಯ ಹೇಳಿದ್ದೇನೆ ಅಷ್ಟೇ ಎಂದರು.
ಶ್ರೀರಾಮುಲು ಪಕ್ಷ ಬಿಡೋದು ಅವರಿಗೆ ಹಾಗೂ ಪಕ್ಷಕ್ಕೆ ಬಿಟ್ಟ ವಿಚಾರ. ಆದರೆ ನನ್ನ ವಿರುದ್ಧ ಆರೋಪ ಮಾಡಿ ಹೋಗೋದು ಯಾಕೆ ಎಂದು ಪ್ರಶ್ನಿಸಿದರು. ಸತೀಶ್ ಜಾರಕಿಹೊಳಿ ವಿರುದ್ಧ ರಾಮುಲುವನ್ನು ಬೆಳೆಸೋದಕ್ಕೆ ಡಿ.ಕೆ. ಶಿವಕುಮಾರ್ ಪ್ಲಾನ್ ಹಾಕೊಂಡಿದ್ದಾರೆ ಅಂತ ಹೊಸ ಬಾಂಬ್ ಸಿಡಿಸಿದ್ರು.
ಪಕ್ಷ ಹೇಳಿದ್ರೆ ಯಾರ ಪರವಾಗಿ ಬೇಕಾದ್ರು ಕೆಲಸ ಮಾಡುತ್ತೇನೆ. ಶ್ರೀರಾಮುಲು ಪರ ಕೆಲಸ ಮಾಡಿ ಅಂದ್ರೂ ಮಾಡ್ತೇನೆ. ನಾನು ಒಮ್ಮೆ ಸ್ನೇಹಿತ ಅಂತ ಒಪ್ಪಿಕೊಂಡ ಮೇಲೆ ಸಾಯೋತನಕ ಸ್ನೇಹಿತನಾಗಿರ್ತಾನೆ ಅಂದ್ರು.
ರಾಮುಲು ಹಲವು ವಿಚಾರಗಳನ್ನ ಹೇಳೋದಕ್ಕಿದೆ. ೪೦ ವರ್ಷದ ವಿಷಯವನ್ನ ಒಂದೇ ದಿನ ಹೇಳೋದಕ್ಕಾಗಲ್ಲ. ಮುಂದಿನ ದಿನದಲ್ಲಿ ಹಂತಹಂತವಾಗಿ ಅದನ್ನ ಬಹಿರಂಗಪಡಿಸುತ್ತೇನೆ ಅಂತ ಹೇಳುವ ಮೂಲಕ ಕುತೂಹಲವನ್ನ ಉಳಿಸಿಕೊಂಡಿದ್ದಾರೆ.