ಬೆಂಗಳೂರು : ಇತ್ತೀಚೆಗೆ ಮುಕ್ತಾಯವಾದ ಖೋ ಖೋ ವಿಶ್ವಕಪ್ ಚಾಂಪಿಯನ್ ಆಗಿ ಭಾರತ ತಂಡ ಹೊರಹೊಮ್ಮಿದೆ. ಪುರುಷ ಹಾಗೂ ಮಹಿಳಾ ವಿಭಾಗ ಎರಡರಲ್ಲೂ ಭಾರತದ ಆಟಗಾರರು ಪಾರಮ್ಯ ಮೆರೆದು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಎರಡು ತಂಡದಲ್ಲೂ ಕರ್ನಾಟಕದ ಆಟಗಾರರು ಇದ್ದರು ಅನ್ನುವುದು ವಿಶೇಷ.
ಕರ್ನಾಟಕದ ಎಂ.ಕೆ ಗೌತಮ್ ಮತ್ತು ಚೈತ್ರಾ ಭಾರತ ತಂಡವನ್ನು ಪ್ರತಿನಿಧಿಸಿದ ಆಟಗಾರರು. ಟೂರ್ನಿಯಲ್ಲಿ ಪಾಲ್ಗೊಂಡು ಬೆಂಗಳೂರಿಗೆ ಆಗಮಿಸಿದ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರು ಆಟಗಾರರನ್ನು ಸನ್ಮಾನಿಸಿ ₹5 ಲಕ್ಷ ನಗದು ಬಹುಮಾನ ಘೋಷಿಸಿದ್ದರು. ಆದರೆ ಈಗಿನ ಬೆಳವಣಿಗೆಯಲ್ಲಿ ಇಬ್ಬರು ಆಟಗಾರರು ರಾಜ್ಯ ಸರ್ಕಾರದ ಬಹುಮಾನವನ್ನು ತಿರಸ್ಕರಿಸಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಚೈತ್ರಾ ಹಾಗೂ ಗೌತಮ್ ಮಾತನಾಡಿ, ‘ಖೋ ಖೋ ಆಟಕ್ಕೆ ನಮ್ಮ ಸರ್ಕಾರದ ಕಡೆಯಿಂದ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ. ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಬಂದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಕೇವಲ ₹5 ಲಕ್ಷ ಬಹುಮಾನ ಘೋಷಿಸಿದ್ದಾರೆ. ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ಆಟಗಾರರಿಗೆ ದೊಡ್ಡ ಮೊತ್ತ ಘೋಷಿಸುವುದರ ಜೊತೆಗೆ, ‘ಎ’ ದರ್ಜೆ ಸರ್ಕಾರಿ ಹುದ್ದೆ ನೀಡುವ ಭರವಸೆಯನ್ನೂ ನೀಡಲಾಗಿದೆ. ಆದರೆ ನಮಗೆ ಆ ರೀತಿಯ ಯಾವ ಸವಲತ್ತನ್ನೂ ಕೊಡುವುದಾಗಿ ತಿಳಿಸದೆ ಇರುವುದು ತೀವ್ರ ಬೇಸರ ಮೂಡಿಸಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ನಗದು ಪ್ರಶಸ್ತಿಯನ್ನು ತಿರಸ್ಕರಿಸುವ ಮೂಲಕ ಮುಖ್ಯಮಂತ್ರಿಗಳನ್ನು ಅವಮಾನಿಸುತ್ತಿಲ್ಲ. ಆದರೆ ನಮಗೆ ಅರ್ಹವಾದ ಗೌರವ ಸಿಗಲಿಲ್ಲ, ಆದ್ದರಿಂದ ನಾವು ನಗದು ಬಹುಮಾನ ತಿರಸ್ಕರಿಸುತ್ತಿದ್ದೇವೆ. ರಾಜ್ಯ ಸರ್ಕಾರವು ಈ ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಿ ಬಹುಮಾನ ಘೋಷಿಸಬೇಕು. ನೆರೆಯ ಮಹಾರಾಷ್ಟ್ರದಲ್ಲಿ ಹೇಗೆ ಮಾಡಲಾಗಿದೆ ಎಂಬುದನ್ನು ನೋಡಿ ನಂತರ ನಿರ್ಧರಿಸಬೇಕು ಎಂದಿದ್ದಾರೆ.
ರಾಜ್ಯ ಖೋ ಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ್ ಮಾತನಾಡಿ, ‘ಸರ್ಕಾರ ರಾಜ್ಯದ ಕ್ರೀಡಾ ನೀತಿಯನ್ನು ಬದಲಾಯಿಸಬೇಕು. ಕ್ರೀಡೆಗಳಿಗೆ ಸರಿಯಾದ ಅನುದಾನ ಜಾರಿಗೊಳಿಸಬೇಕು. ಉನ್ನತ ಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟುಗಳಿಗೆ ಅರ್ಹತೆ ತಕ್ಕಂತೆ ಹುದ್ದೆ ನೀಡಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದರು.
ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರ ಬಗ್ಗೆಯೂ ಸಾರ್ವಜನಿಕರ ಅಸಮಾಧಾನ : ರಾಜ್ಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಸದ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿರುವ ಗೋವಿಂದರಾಜು ಹಲವು ವರ್ಷದಿಂದ ಅಸೋಸಿಯೇಷನ್ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ಯಾವುದೇ ಸರ್ಕಾರ ಬಂದ್ರೂ ಅವರು ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ. ಕ್ರೀಡೆ, ಕ್ರೀಡಾಪಟುಗಳ ಅಭಿವೃದ್ಧಿಗೆ ಬೇಕಾಗಿ ಅವರು ಏನೂ ಮಾಡುತ್ತಿಲ್ಲ ಎಂದು ಜನ ಆಕ್ರೋಶ ಹೊರಹಾಕುತ್ತಿದ್ದಾರೆ.